ನವದೆಹಲಿ: ಹಾಸನಾಂಬೆ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಸಹಕಾರಕ್ಕೆ ಸಂಸದ ಶ್ರೇಯಸ್ ಪಟೇಲ್ ಮನವಿ ಮಾಡಿದರು.
ಕೇಂದ್ರ ಪ್ರವಾಸೋದ್ಯಮ ಶಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿರುವ ಅವರು, ಹಾಸನದ ಐತಿಹಾಸಿಕ ಶ್ರೀ ಹಾಸನಾಂಬೆ ದೇವಾಲಯವು ವರ್ಷಕ್ಕೊಮ್ಮೆ ಕೆಲವೇ ದಿನಗಳ ಕಾಲ ಭಕ್ತರ ದರ್ಶನಕ್ಕೆ ತೆರೆಯುವ ಅಪೂರ್ವ ಕ್ಷೇತ್ರವಾಗಿದೆ. ಈ ವರ್ಷದ ಶ್ರೀ ಹಾಸನಾಂಬೆ ದೇವಿ ದರ್ಶನ ಹಾಗೂ ಮಹೋತ್ಸವವು ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ನಡೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಹಾಗೂ ಪ್ರವಾಸಿಗರು ಹಾಸನಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಹಾಸನಾಂಬೆ ಮಹೋತ್ಸವ–2026ಕ್ಕೆ ರಾಷ್ಟ್ರಮಟ್ಟದಲ್ಲಿ ವ್ಯಾಪಕ ಪ್ರಚಾರ ನೀಡುವಂತೆ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ ಸಲ್ಲಿಸಿದ್ದೇನೆ. ಇನ್ಕ್ರೆಡಿಬಲ್ ಇಂಡಿಯಾ ವೆಬ್ಸೈಟ್, ಅಧಿಕೃತ ಸಾಮಾಜಿಕ ಮಾಧ್ಯಮಗಳು, ದೂರದರ್ಶನ, ಆಕಾಶವಾಣಿ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಪ್ರಚಾರ ಮಾಧ್ಯಮಗಳ ಮೂಲಕ ಹಾಸನಾಂಬೆ ಮಹೋತ್ಸವದ ಕುರಿತು ದೇಶಾದ್ಯಂತ ಮಾಹಿತಿ ತಲುಪಿಸುವಂತೆ ಕೋರಿದ್ದೇನೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಇಂಗ್ಲಿಷ್, ಹಿಂದಿ ಹಾಗೂ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸಿ, ರಾಷ್ಟ್ರೀಯ ಪ್ರವಾಸೋದ್ಯಮ ಸಂಸ್ಥೆಗಳು, ಪ್ರವಾಸ ನಿರ್ವಾಹಕರು ಹಾಗೂ ಮಾಧ್ಯಮಗಳ ಮೂಲಕ ಹೆಚ್ಚಿನ ಪ್ರಚಾರ ನೀಡಬೇಕು ಮತ್ತು ಹಾಸನಾಂಬೆ ಮಹೋತ್ಸವವನ್ನು ರಾಷ್ಟ್ರೀಯ ಪ್ರವಾಸೋದ್ಯಮ ಕ್ಯಾಲೆಂಡರ್ನಲ್ಲಿ ಪ್ರಮುಖವಾಗಿ ಸೇರಿಸಬೇಕು ಎಂದು ಮನವಿ ಮಾಡಿದ್ದೇನೆ ಎಂದಿದ್ದಾರೆ.
ಹಾಸನಾಂಬೆ ಕ್ಷೇತ್ರವನ್ನು ಬೇಲೂರು, ಹಳೇಬೀಡು ಹಾಗೂ ಶ್ರವಣಬೆಳಗೊಳದಂತಹ ವಿಶ್ವಪ್ರಸಿದ್ಧ ಪಾರಂಪರಿಕ ತಾಣಗಳೊಂದಿಗೆ ಸಂಯೋಜಿಸಿ, ಹಾಸನ ಜಿಲ್ಲೆಯನ್ನು ದೇಶದ ಪ್ರಮುಖ ಆಧ್ಯಾತ್ಮಿಕ ಹಾಗೂ ಪಾರಂಪರಿಕ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶವಾಗಿದೆ. ಮಹೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವುದರಿಂದ, ರಾಷ್ಟ್ರಮಟ್ಟದ ಪ್ರಚಾರಕ್ಕಾಗಿ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಕೇಂದ್ರ ಪ್ರವಾಸೋದ್ಯಮ ಸಚಿವರಿಗೆ ಮನವಿ ಮಾಡಿದ್ದಾರೆ.
