ಚನ್ನರಾಯಪಟ್ಟಣ: ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ನ 3ನೇ ವರ್ಷದ ಸಂಸ್ಥಾಪನಾ ದಿನಾಚರಣೆ, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಅ.9ರಂದು ಹಾಸನದ ಕಲಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟನೆಯ ತಾಲೂಕು ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ಚನ್ನರಾಯಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಬಾಬಾಸಾಹೇಬ್ ಅಂಬೇಡ್ಕರ್ ಅವರ ಮರಿಮೊಮ್ಮಗ ಹಾಗೂ ರಿಪಬ್ಲಿಕ್ ಸೇನೆಯ ಯುವ ನಾಯಕ ಅಮನ್ ಆನಂದರಾಜ್ ಅಂಬೇಡ್ಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ ಹಾಗೂ ಸಮಾಜದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕವಿ ಜಯಕುಮಾರ್ ಸಾದಿಗೆ ಅವರ ‘ಮೊದಲ ಕವಿತೆ’ ಕವನ ಸಂಕಲನವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಸಂಘಟನೆಯ ಸಂಸ್ಥಾಪನಾ ದಿನದ ಅಂಗವಾಗಿ ಬೈಕ್ ರ್ಯಾಲಿ ಹಾಗೂ ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆಯನ್ನೂ ಆಯೋಜಿಸಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆ, ಸಂಘಟನೆಯ ಮೂರು ವರ್ಷಗಳ ಕಾರ್ಯಚಟುವಟಿಕೆ, ಸಾಧನೆಗಳು ಹಾಗೂ ಮುಂದಿನ ಕ್ರಿಯಾ ಯೋಜನೆಗಳ ಕುರಿತು ಚಿಂತನ-ಮಂಥನ ನಡೆಯಲಿದೆ ಎಂದರು.
2023ರ ಅ.9ರಂದು ಹುಬ್ಬಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಸಭೆಯಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಮತೀನ್ ಕುಮಾರ್ ಅವರ ನೇತೃತ್ವದಲ್ಲಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಲೋಕಾರ್ಪಣೆಗೊಂಡಿತ್ತು. ಕಳೆದ ಮೂರು ವರ್ಷಗಳಿಂದ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ದುರ್ಬಲ ವರ್ಗಗಳ ಮೇಲಿನ ದೌರ್ಜನ್ಯದ ವಿರುದ್ಧ ಸಂಘಟನೆ ಧ್ವನಿ ಎತ್ತುತ್ತಿದ್ದು, ಯುವಕರಿಗೆ ಕೇಡರ್ ಕ್ಯಾಂಪ್ಗಳು, ಆಶಾ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಸೇರಿದಂತೆ ಸುಮಾರು 3,000ಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ. ಚನ್ನರಾಯಪಟ್ಟಣ ತಾಲೂಕಿನಿಂದ ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ ಎಂದು ಮಂಜುನಾಥ್ ಹೇಳಿದರು.
ತಾಲೂಕು ಉಪಾಧ್ಯಕ್ಷ ಗಣೇಶ್, ಜಿಲ್ಲಾ ಸಮಿತಿ ಸದಸ್ಯ ಮಂಜುನಾಥ್, ಜಿಲ್ಲಾ ಸಂಚಾಲಕ ರವಿ ಮಾದಿಹಳ್ಳಿ, ಬಾಗೂರು ಹೋಬಳಿ ಅಧ್ಯಕ್ಷ ಕುಂಬಾರಹಳ್ಳಿ ಪುಟ್ಟಸ್ವಾಮಿ ಇದ್ದರು.
