ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇಲ್ಲಿನ ಮಾಣಿಕ್ತಲ ಇಎಸ್‌ಐ ಆಸ್ಪತ್ರೆಯ ವೈದ್ಯಕೀಯ ಸೇವೆಗಳು ತೀವ್ರ ವಿವಾದಕ್ಕೀಡಾಗಿವೆ. ಡಯಾಲಿಸಿಸ್‌ಗಾಗಿ ದಾಖಲಾಗಿದ್ದ ಮಹಿಳೆಯೊಬ್ಬರು ಮೃತಪಟ್ಟ ನಂತರ, ಅವರ ದೇಹದ ಮೇಲೆ ಗಾಯಗಳು ಕಂಡುಬಂದಿವೆ.
ಇಲಿಗಳು ಮೃತದೇಹವನ್ನು ಕಚ್ಚಿ ತಿಂದಿವೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಆರೋಪಗಳ ಕುರಿತು ತನಿಖೆ ನಡೆಸಲು ಆಸ್ಪತ್ರೆಯ ಆಡಳಿತ ಮಂಡಳಿಯು 10 ಸದಸ್ಯರ ಸಮಿತಿಯನ್ನು ರಚಿಸಿದ್ದು, ಮೂರು ದಿನಗಳೊಳಗೆ ಆಸ್ಪತ್ರೆಯ ಅಧೀಕ್ಷಕರಿಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.
ಹೌರಾದ ಅಂಡುಲ್ ನಿವಾಸಿಯಾದ ಅಲ್ಪನಾ ಡೇ ಎಂಬುವರನ್ನು ಕಳೆದ ಗುರುವಾರ (ಅಕ್ಟೋಬರ್ 8) ಡಯಾಲಿಸಿಸ್‌ಗಾಗಿ ಮಾಣಿಕ್ತಲ ಇಎಸ್‌ಐ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ (ಸರ್ಜರಿ ವಾರ್ಡ್) 108ನೇ ಬೆಡ್ಗೆ ದಾಖಲಿಸಲಾಗಿತ್ತು. ಆದರೆ, ಅಂದು ರಾತ್ರಿ ಅವರು ಕೊನೆಯುಸಿರೆಳೆದರು. ಶುಕ್ರವಾರ (ಅಕ್ಟೋಬರ್ 9) ಬೆಳಗ್ಗೆ ಕುಟುಂಬಸ್ಥರು ಆಸ್ಪತ್ರೆಗೆ ಬಂದಾಗ ಮಹಿಳೆಯ ದೇಹದ ವಿವಿಧ ಭಾಗಗಳಲ್ಲಿ ಗಾಯಗಳಿರುವುದನ್ನು ಗಮನಿಸಿದ್ದಾರೆ.
ಇಲಿಗಳು ಅವರ ದವಡೆ, ಹಣೆಯ ಭಾಗ, ಕಣ್ಣುಗಳು, ಕೈಗಳು ಮತ್ತು ಕಾಲುಗಳ ಮಾಂಸವನ್ನು ಕಚ್ಚಿ ತಿಂದಿವೆ ಎಂದು ಅವರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಕೈ ಬೆರಳುಗಳ ಮಾಂಸವೂ ಕಾಣೆಯಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಸಾವಿನ ನಂತರ ಇಲಿಗಳು ದೇಹವನ್ನು ಕಚ್ಚಿವೆಯೋ ಅಥವಾ ಅದಕ್ಕೂ ಮುನ್ನವೇ ಈ ಘಟನೆ ನಡೆದಿದೆಯೋ ಎಂಬ ಬಗ್ಗೆ ಆಸ್ಪತ್ರೆಯವರು ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಸಾವಿನ ನಿಖರ ಕಾರಣ ಏನೆಂಬುವನ್ನೂ ಸ್ಪಷ್ಟಪಡಿಸಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ನಾವು ಈಗಾಗಲೇ ಮಾಣಿಕ್ತಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಆಸ್ಪತ್ರೆಯ ಸೂಪರಿಂಟೆಂಡೆಟ್ಗೂ ಲಿಖಿತ ದೂರು ನೀಡಿದ್ದೇವೆ ಎಂದು ಮೃತರ ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ.
