ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಬ್ರೇಕ್ ಹಾಕಿರುವ ಜಿಲ್ಲಾಡಳಿತ ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದೆ.
ಮಹಿಷ ದಸರಾ ಆಚರಣಾ ಸಮಿತಿ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರ ಪ್ರತಿಮೆಯ ಬಳಿ ಮಹಿಷ ದಸರಾ ಆಚರಣೆಗೆ ಸಿದ್ಧತೆ ನಡೆಸಿತ್ತು. ಈ ಕುರಿತು ಜಿಲ್ಲಾಡಳಿತದ ಅನುಮತಿಗಾಗಿ ಮನವಿಯನ್ನು ಮಾಡಲಾಗಿತ್ತು.
ಆದರೆ, ದಸರಾ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ತೊಂದರೆಯಾಗುವುದನ್ನು ಮನಗಂಡು, ಚಾಮುಂಡಿಬೆಟ್ಟದಲ್ಲಿ ದಸರಾ ಆಚರಣೆಗೆ ತಡೆ ನೀಡಲಾಗಿದೆ. ಜತೆಗೆ, ಅನುಮತಿಯಿಲ್ಲದೆ ಆಚರಣೆ ನಡೆಸಿ, ಜನರಿಗೆ ತೊಂದರೆ ಕೊಡಬಹುದು ಎಂಬ ಕಾರಣಕ್ಕೆ ನಿಷೇಧಾಜ್ಞೆ ಜಾರಿಗೊಳಿಸಿದೆ.
ಈ ನಡುವೆ ನಗರದ ಪುರಭವನದಲ್ಲಿ ಮಹಿಷ ದಸರಾ ಆಚರಣೆಗೆ ಅವಕಾಶ ನೀಡಲಾಗಿದ್ದು, ಯಾವುದೇ ಕಾರಣಕ್ಕೂ ಬೆಟ್ಟದಲ್ಲಿ ಆಚರಣೆ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಭಾನುವಾರ ಬೆಳಗ್ಗೆ ಆರು ಗಂಟೆಯವರೆಗೆ ಪ್ರತಿಮೆ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಮೈಸೂರು ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಆದೇಶ ಮಾಡಿದ್ದಾರೆ.
