ದೇಶ ವಿರೋಧಿ ಚಟುವಟಿಕೆಗೆ ವಿದೇಶಿ ನಿಧಿ ಪಡೆಯುವುದನ್ನು ಸಂಪೂರ್ಣವಾಗಿ ತಡೆಯಬೇಕು: ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ: ದೇಶದ ವಿರುದ್ಧ ವಿದೇಶಿ ನಿಧಿ ಬಳಸಿ ನಡೆಯುತ್ತಿರುವ ಸಂಚುಗಳ ಕುರಿತು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ಇಂತಹ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತದ ವಿರುದ್ಧದ ಕೆಲ ಸಂಚುಗಳು ಹಾಗೂ ವಿದೇಶಿ ಮೂಲಗಳಿಂದ ಎನ್ಜಿಒಗಳಿಗೆ ಸಿಗುತ್ತಿರುವ ನಿಧಿಯ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ವಿದೇಶಿ ನಿಧಿ ಹಾಗೂ ಸಂಚುಗಳು: ಕೆಲವು ರಾಜಕೀಯ ಪಕ್ಷಗಳು ಹಾಗೂ ದೇಶದ ವಿರುದ್ಧದ ಚಟುವಟಿಕೆಗಳಿಗೆ ವಿದೇಶಿ ಮೂಲಗಳಿಂದ ಹಣ ಪಡೆಯುತ್ತಿವೆ. ನಮ್ಮ ಪಕ್ಕದ ದೇಶಗಳಾದ ನೇಪಾಳ, ಶ್ರೀಲಂಕಾ, ಬಾಂಗ್ಲಾ ದೇಶಗಳಿಗೆ ವಿದೇಶಿ ದೇಣಿಗೆ ಹರಿದು ಬಂದಿರುವುದು ಸಾಬೀತಾಗಿದೆ. ವಿಶೇಷವಾಗಿ ಸೋರಸ್ ಫೌಂಡೇಶನ್ನಂತಹ ಸಂಸ್ಥೆಗಳಿಂದ ಕಳೆದ 10 ವರ್ಷಗಳಿಂದ ನಿಧಿ ಹರಿದುಬರುತ್ತಿದೆ ಎಂಬುದು ಸಾಬೀತಾಗಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ಹೇಳಿಕೆಗಳ ಬಗ್ಗೆ ಟೀಕೆ:
ರಾಹುಲ್ ಗಾಂಧಿ ಅವರು ವಿದೇಶಗಳಿಗೆ ಹೋದಾಗಲೆಲ್ಲಾ ದೇಶದ ವಿರುದ್ಧ ಮಾತನಾಡುತ್ತಾರೆ ಮತ್ತು ದೇಶದಲ್ಲಿ ಪ್ರಜಾಪ್ರಭುತ್ವವಿಲ್ಲ ಎಂದು ಬಿಂಬಿಸಲು ಯತ್ನಿಸುತ್ತಾರೆ. ಆದರೆ ಪ್ರಜಾಪ್ರಭುತ್ವ ಇಲ್ಲದಿದ್ದರೆ ಅವರು ಹೇಗೆ ಪ್ರತಿಪಕ್ಷದ ನಾಯಕರಾಗುತ್ತಿದ್ದರು, ಅವರು ಸ್ವತಃ ಎರಡು ರಾಜ್ಯಗಳಲ್ಲಿ ಸ್ಪರ್ಧಿಸುವುದೇ ದೇಶದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅವರು ಸುಳ್ಳು ಹೇಳುತ್ತಿದ್ದಾರೆ ಎನ್ನುವುದು ಇದರಿಂದಲೇ ತಿಳಿಯುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಗೆ ಬಿಜೆಪಿಯನ್ನು ಚುನಾವಣೆಯಲ್ಲಿ ಎದುರಿಸಲಾಗದೇ ಸಿಜೆಪಿಯಂತಹ ಸಂಘಟನೆಗೆ ಬೆಂಬಲದೊಂದಿದೆ ಅಭದ್ರತೆ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಇಬ್ಬರೂ ಒಂದೇ ಎಂದು ಹೇಳುತ್ತಿದ್ದಾರೆ. ಏಕೆಂದರೆ ಇಬ್ಬರೂ ವಯಕ್ತಿಕವಾಗಿ ವಿಫಲರಾಗಿದ್ದಾರೆ. ಕೇಂದ್ರ ಸರ್ಕಾರವು ಎನ್ಜಿಒಗಳಿಗೆ ಬರುವ ವಿದೇಶಿ ನಿಧಿಯ ಮೇಲೆ ಕಠಿಣ ನಿಯಂತ್ರಣ ತಂದಿರುವಂತೆ, ಭಾರತ ವಿರೋಧಿ ನಿಧಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮಹಿಳಾ ಮೀಸಲಾತಿ ಜಾರಿಗೂ ಮೊದಲು ಸರ್ವ ಪಕ್ಷಗಳ ಸಭೆ ಕರೆಯುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಡಿರುವ ಮನವಿ ಕುರಿತು ಕೇಳಿದ ಪ್ರಶ್ನೆಗೆ ವಿಶೇಷ ಅಧಿವೇಶನ ನಡೆಯುವ ಮುನ್ನ ಸರ್ವ ಪಕ್ಷಗಳ ಸಭೆ ಕರೆಯಲಾಗುತ್ತದೆ ಎಂದು ಹೇಳಿದರು.
