ರಾಜಕೀಯ ಸುದ್ದಿ

ರಾಜ್ಯಪಾಲರ ನೈತಿಕತೆಗೆ ಎಚ್‌ಡಿಕೆ ಪ್ರಕರಣ ಸವಾಲ್: ಇಕ್ಕಟ್ಟಿಗೆ ಸಿಲುಕಿಸಿದ ಎಸ್ಐಟಿ ಮನವಿ !

Share It

ಬೆಂಗಳೂರು: ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅವಕಾಶ ನೀಡಿರುವುದು ಕಾನೂನಬಾಹಿರ ಎಂಬ ಆರೋಪದ ಬೆನ್ನಲ್ಲೇ ಇದೀಗ ಕಾನೂನು ಬದ್ಧವಾದ ಆರೋಪವೊಂದನ್ನು ರಾಜ್ಯಪಾಲರ ಅಂಗಳಕ್ಕೆ ಹಾಕಿ ಅವರ ನೈತಿಕತೆಗೆ ಸವಾಲು ಹಾಕಲಾಗಿದೆ.

ಸಿದ್ದರಾಮಯ್ಯ ವಿರುದ್ಧದ ಮೂಡಾ ಹಗರಣದ ಆರೋಪದಲ್ಲಿ ಯಾವುದೇ ತನಿಖಾ ಸಂಸ್ಥೆ ಪ್ರಾಸಿಕ್ಯೂಷನ್ ಮಾಡಲು ಅನುಮತಿ ಕೇಳಿಲ್ಲ. ಬದಲಾಗಿ ಖಾಸಗಿ ದೂರಿನ ಅನ್ವಯ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ ಎಂಬುದು ಕಾಂಗ್ರೆಸ್ ಆರೋಪವಾಗಿದೆ.

ಇದೀಗ ಎಸ್ಐಟಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ಗಣಿ ಲಂಚ ಹಗರಣದ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಅನುಮತಿ ಕೇಳಿದ್ದಾರೆ. ಆ ಮೂಲಕ ರಾಜಕೀಯ ಹೋರಾಟಕ್ಕೆ ಕಾಂಗ್ರೆಸ್ ತೀರ್ಮಾನಿಸಿದೆ.

ಕುಮಾರಸ್ವಾಮಿ ಪ್ರಕರಣಕ್ಕೆ ಅನುಮತಿ ನೀಡಿದ್ದೇ ಆದರೆ, ಕಾಂಗ್ರೆಸ್ ಬಹುದೊಡ್ಡ ಗೆಲುವು ಪಡೆದಂತಾಗುತ್ತದೆ. ಲೋಕಾಯುಕ್ತದ ಮೂಲಕ ಬಹುದೊಡ್ಡ ವಿಕೆಟ್ ಬೀಳಿಸುವ ಅವಕಾಶ ಸರಕಾರಕ್ಕಿದೆ. ಚಾರ್ಜ್ ಶೀಟ್ ಆರೋಪದಲ್ಲಿ ಕುಮಾರಸ್ವಾಮಿ ಅವರನ್ನು ಮಾಜಿಯಾಗಿಸಬಹುದು, ಜತೆಗೆ, ಬಂಧಿಸುವಲ್ಲಿಗೆ ಪ್ರಕರಣವನ್ನು ಕೊಂಡೊಯ್ಯಬಹುದು.

ಒಂದು ವೇಳೆ ರಾಜ್ಯಪಾಲರು ಚಾರ್ಜ್ ಶೀಟ್ ಸಲ್ಲಿಕೆಗೆ ಅವಕಾಶ ನೀಡದಿದ್ದರೆ, ಕಾಂಗ್ರೆಸ್ ಗೆ ಬಹುದೊಡ್ಡ ರಾಜಕೀಯ ಅಸ್ತ್ರ ಸಿಕ್ಕಂತಾಗುತ್ತದೆ. ರಾಜ್ಯಪಾಲರು ಬಿಜೆಪಿ ‘ಕೈಗೊಂಬೆ’ ಎಂಬ ಜನಾಭಿಪ್ರಾಯ ಮೂಡಿಸಲು ಸುಲಭವಾಗುತ್ತದೆ. ತನಿಖಾ ಸಂಸ್ಥೆಯ ಮನವಿಯಿಲ್ಲದೆ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದು, ಲೋಕಾಯುಕ್ತ ಮನವಿ ಮಾಡಿದರೂ, ಕುಮಾರಸ್ವಾಮಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಗೆ ಅವಕಾಶ ನೀಡದಿರುವುದು ಕಾಂಗ್ರೆಸ್ ಗೆ ಬಹುದೊಡ್ಡ ಅಸ್ತ್ರವಾಗಲಿದೆ.


Share It

You cannot copy content of this page