ಅಪರಾಧ ಸುದ್ದಿ

ಮಂಗಳೂರು: ಬಸ್​​ನಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ, ಗುಪ್ತಾಂಗ ಪ್ರದರ್ಶನ; ಕಂಡಕ್ಟರ್ ಬಂಧನ

Share It

ಮಂಗಳೂರು: ಚಲಿಸುವ ಬಸ್​ನಲ್ಲೇ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಅಸಭ್ಯ ಸನ್ನೆ ಹಾಗೂ ಗುಪ್ತಾಂಗ ಪ್ರದರ್ಶನ ಮಾಡಿ ವಿಕೃತಿ ಮೆರೆದಿದ್ದ ಖಾಸಗಿ ಬಸ್ ಕಂಡಕ್ಟರ್‌ನನ್ನು ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆ ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕಲ್ಲೇರಿ ಮನೆ ನಿವಾಸಿಯಾಗಿದ್ದು, ಪ್ರಸ್ತುತ ಉಪ್ಪಿನಂಗಡಿಯ ಕರ್ವೇಲು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಇರ್ಫಾನ್ (32) ಬಂಧಿತ ಆರೋಪಿಯಾಗಿದ್ದಾನೆ. ಈತ ಮಂಗಳೂರು ಮತ್ತು ವಿಟ್ಲ ನಡುವೆ ಸಂಚರಿಸುವ ಖಾಸಗಿ ಬಸ್​​ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ.

ಪ್ರಕರಣದ ಹಿನ್ನೆಲೆ: ಜುಲೈ 9, 2026ರ ಗುರುವಾರ ಸಂಜೆ ಸುಮಾರು 5 ಗಂಟೆಯ ವೇಳೆಗೆ ಬಸ್​​ ಎಂದಿನಂತೆ ಸಂಚರಿಸುತ್ತಿದ್ದಾಗ ಈ ಆಘಾತಕಾರಿ ಘಟನೆ ಸಂಭವಿಸಿದೆ. ಬಸ್​ನಲ್ಲಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡ ಕಂಡಕ್ಟರ್ ಇರ್ಫಾನ್, ವಿಕೃತವಾಗಿ ವರ್ತಿಸಲು ಆರಂಭಿಸಿದ್ದಾನೆ. ವಿದ್ಯಾರ್ಥಿನಿಯರ ಮುಂಭಾಗವೇ ತನ್ನ ಗುಪ್ತಾಂಗ ಪ್ರದರ್ಶನ ಮಾಡಿದ ಆರೋಪಿ, ಅತ್ಯಂತ ಅಸಭ್ಯವಾಗಿ ಸನ್ನೆಗಳನ್ನು ಮಾಡಿದ್ದಾನೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿನಿಯರನ್ನು ಬಸ್​ನ ಹಿಂದಿನ ಸೀಟಿಗೆ ಬರುವಂತೆ ಕರೆದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಲಾಗಿದೆ.

ದೂರು ದಾಖಲು, ಆರೋಪಿಯ ಬಂಧನ: ಕಂಡಕ್ಟರ್‌ನ ಈ ವಿಕೃತ ವರ್ತನೆಯಿಂದ ಆಘಾತಕ್ಕೊಳಗಾದ ವಿದ್ಯಾರ್ಥಿನಿಯರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಆರೋಪಿ ಇರ್ಫಾನ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


Share It

You cannot copy content of this page