ಬೆಂಗಳೂರು: ತಾಯಿ, ಅಜ್ಜಿ ಹಾಗೂ ಬಾವನನ್ನು ಬರ್ಬರವಾಗಿ ಹತ್ಯೆಗೈದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಿಗೆಪಾಳ್ಯದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಪ್ರಶಾಂತ್ (34) ಹತ್ಯೆ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪಿ. ಮಾರಕಾಸ್ತ್ರದಿಂದ ಕೊಚ್ಚಿ ಮಂಗಳಮ್ಮ (55) ನಂಜಮ್ಮ (65) ಹಾಗೂ ಸತೀಶ್ (50) ಎಂಬವರನ್ನು ಹತ್ಯೆ ಮಾಡಲಾಗಿದೆ. ಅವಿವಾಹಿತನಾಗಿದ್ದ ಪ್ರಶಾಂತ್ ಪೋಷಕರು, ಅಜ್ಜಿ ಹಾಗೂ ಬಾವನೊಂದಿಗೆ ವಾಸವಿದ್ದ. ತಾಯಿ ಮಂಗಳಮ್ಮ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಅಜ್ಜಿ ಪೌರ ಕಾರ್ಮಿಕರಾಗಿದ್ದರು. ಬಾವ ಸಹ ಅವಿವಾಹಿನಾಗಿದ್ದು, ಫ್ಲಂಬರ್ ಕೆಲಸ ಮಾಡಿಕೊಂಡು ಅದೇ ಮನೆಯಲ್ಲಿದ್ದರು.
”ಇಂದು ಬೆಳಿಗ್ಗೆ ತಂದೆ ಮನೆಯಲ್ಲಿರದಿದ್ದಾಗ ಮಾರಕಾಸ್ತ್ರ ಬಳಸಿ ಪ್ರಶಾಂತ್ ಮೂವರನ್ನೂ ಹತ್ಯೆಗೈದಿದ್ದಾನೆ. ಮನೆಯವರ ಕಿರುಚಾಟ ಕೇಳಿ ಧಾವಿಸಿದ್ದ ಅಕ್ಕಪಕ್ಕದವರು ಆರೋಪಿ ಪ್ರಶಾಂತ್‌ನನ್ನ ಹಿಡಿದು ರೂಮ್‌ನಲ್ಲಿ ಕೂಡಿ ಹಾಕಿದ್ದಾರೆ. ಇದಾದ ನಂತರ ರೂಮ್‌ನಲ್ಲಿಯೇ ಪ್ರಶಾಂತ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಶಾಂತ್ ಮಾನಸಿಕ ಆರೋಗ್ಯದ ಸಮಸ್ಯೆ ಹೊಂದಿದ್ದ ಎಂದು ಹೇಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ” ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್ ತಿಳಿಸಿದ್ದಾರೆ.
”ತಾಯಿಯೊಂದಿಗೆ ಪ್ರಶಾಂತ್ ಸಣ್ಣಪುಟ್ಟ ಗಲಾಟೆ ಮಾಡುತ್ತಿದ್ದ. ರಾತ್ರಿ ಏನೂ ಜಗಳವಾಗಿರಲಿಲ್ಲ. ನಾನು ಬೆಳಗ್ಗೆ ಇಸ್ತ್ರಿ ಅಂಗಡಿ ತೆರೆಯಲು ಹೋದೆ. ಆತ ಮನೆಯಲ್ಲಿ ಈ ರೀತಿ ಮಾಡಿದ್ದಾನೆ. ನಾನು ಮನೆಯಲ್ಲಿದ್ದಿದ್ದರೆ ನನ್ನನ್ನೂ ಮುಗಿಸಿ ಬಿಡುತ್ತಿದ್ದನೇನೋ ಗೊತ್ತಿಲ್ಲ. ಅವನಿಗೆ ಜ್ಞಾನ ಸರಿಯಾಗಿಯೇ ಇತ್ತು. ಚಾಲಕನಾಗಿ ಕೆಲಸ ಮಾಡುತ್ತಿದ್ದ. ಯಾಕೆ ಈ ರೀತಿ ಮಾಡಿದ್ದಾನೋ ಗೊತ್ತಾಗುತ್ತಿಲ್ಲ” ಎಂದು ಪ್ರಶಾಂತ್‌ನ ತಂದೆ ಚಿಕ್ಕಣ್ಣ ತಿಳಿಸಿದ್ದಾರೆ.

