ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ವಿಜಯಪುರ ಮೂಲದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅರ್ಜುನ ಕುಶಾಲಸಿಂಗ್ ರಜಪೂತ (32), ರವಿನಾಥ ಪತ್ತಾರ (52), ಪುಷ್ಪಾ ರವಿನಾಥ ಪತ್ತಾರ (40), ಮೇಘರಾಜ ರಜಪೂತ (12) ಮೃತ ದುರ್ದೈವಿಗಳು. KA 28 D 1021 ಸಂಖ್ಯೆಯ ಕಾರಿನಲ್ಲಿ ನಾಲ್ವರು ವಿಜಯಪುರದಿಂದ ಜಮಖಂಡಿಯಲ್ಲಿರುವ ದೇವಸ್ಥಾನಕ್ಕೆ ಹೊರಟಿದ್ದರು. ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಜಮಖಂಡಿಯಿಂದ ವಿಜಯಪುರಕ್ಕೆ ಬರುತ್ತಿತ್ತು. ಅರ್ಜುಣಗಿ ಗ್ರಾಮದ ಬಳಿ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತ ಸ್ಥಳಕ್ಕೆ ವಿಜಯಪುರ ಎಸ್ಪಿ ಋಷಿಕೇಶ ಸೋನೆವಣೆ ಭೇಟಿ ನೀಡಿದ್ದಾರೆ. ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಸ್ತೆ ಅಪಘಾತದಲ್ಲಿ ಕಾರಾಗೃಹ ಸಿಬ್ಬಂದಿ ಸಾವು
ಧಾರವಾಡ: ಗರಗ ಗ್ರಾಮದ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ, ಬೈಕ್ನಲ್ಲಿದ್ದ ಕಾರಾಗೃಹ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧಾರವಾಡ ಕೇಂದ್ರ ಕಾರಾಗೃಹದ ಸಿಬ್ಬಂದಿ ರುದ್ರಪ್ಪ ಸಿದ್ದಣ್ಣವರ ಮೃತ ದುರ್ದೈವಿ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ರುದ್ರಪ್ಪ ಅವರು ಕರ್ತವ್ಯ ಮುಗಿಸಿ ವಾಪಸ್ ಮನೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ನಡೆದಿದೆ.
ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು
ಬೆಂಗಳೂರು: ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಕೆಂಗೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. ಮುಖೇಶ್ (22) ಮೃತ ದುರ್ದೈವಿ. ಮುಖೇಶ್ ಬೈಕ್ನಲ್ಲಿ ನೈಸ್ ರಸ್ತೆಯ ಹೊಸಕೆರೆಹಳ್ಳಿಯಿಂದ ತೆರಳುತ್ತಿದ್ದನು. ಅತಿವೇಗವಾಗಿ ಬೈಕ್ ಚಲಾಯಿಸುತ್ತಿದ್ದು, ನಿಯಂತ್ರಣ ತಪ್ಪಿ ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದಲ್ಲಿ ಮುಖೇಶ್ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಕೆಂಗೇರಿ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.