ಪುಣೆ: ಹಿರಿಯ ನಟ ನಾನಾ ಪಾಟೇಕರ್ ಅವರ ಪಾರ್ಥಿವ ಶರೀರವನ್ನು ಪುಣೆ ಜಿಲ್ಲೆಯ ಡೊಂಜೆ ಗ್ರಾಮದ ತೋಟದ ಮನೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಬೆಳ್ಳಿ ಪರದೆಯಲ್ಲಿ ಅನೇಕ ಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿದ 75 ವರ್ಷದ ನಟನ ಅಂತ್ಯಕ್ರಿಯೆಯನ್ನು “ನಾನಾ ಅಮರ್ ರಹೇ” (ಚಿರಕಾಲ ಬದುಕಲಿ ನಾನಾ) ಎಂಬ ಘೋಷಣೆಗಳ ನಡುವೆ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು. ಸಾವಿರಾರು ಜನರು ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಆಪ್ತರ ಪ್ರಕಾರ, ತಮ್ಮ ಅಂತ್ಯಸಂಸ್ಕಾರವನ್ನು ತಮ್ಮ ಫಾರ್ಮ್ಹೌಸ್ನಲ್ಲೇ ನಡೆಸಬೇಕೆಂದು ಪಾಟೇಕರ್ ಬಯಸಿದ್ದರು. ಇದಕ್ಕೂ ಮುನ್ನ, ಗೋವಾದಿಂದ ಪಾರ್ಥಿವ ಶರೀರವು ಪುಣೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ನಟನಿಗೆ ಗೌರವ ನಮನ ಸಲ್ಲಿಸಿದರು.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್, ಕೇಂದ್ರ ಸಚಿವ ರಾಮದಾಸ್ ಅಠಾವಳೆ ಮತ್ತು ಮುರಳೀಧರ್ ಮೊಹೋಲ್, ರಾಜ್ಯ ಸಚಿವ ಚಂದ್ರಕಾಂತ್ ಪಾಟೀಲ್, ಉದಯ್ ಸಮಂತ್ ಮತ್ತು ಮಾಧುರಿ ಮಿಸಾಲ್, ಲೋಕಸಭಾ ಸಂಸದ ಸುನಿಲ್ ತತ್ಕರೆ, NAAM ಫೌಂಡೇಶನ್ ಸಹ-ಸಂಸ್ಥಾಪಕ ಮತ್ತು ನಟ ಮಕರಂದ್ ಅನಸ್ಪುರೆ, FDA ಆಯುಕ್ತ ತುಕಾರಾಂ ಮುಂಢೆ, ನಟ ಜಾಕಿ ಶ್ರಾಫ್, ಸಾಜಿದ್, ಚಲನಚಿತ್ರ ನಿರ್ಮಾಪಕ ಅನಿಲ್ ಶರ್ಮಾ, ಸಾಜಿದ್ ನಾಡಿಯಾದ್ವಾಲಾ ಮತ್ತು ಬಾಲಿವುಡ್, ರಾಜಕೀಯ, ಕ್ರೀಡಾ ಮತ್ತು ಸಾಮಾಜಿಕ ಕ್ಷೇತ್ರದ ಹಲವಾರು ಪ್ರಮುಖರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಕೆ ಮಾಡಿದರು.
ಸೌದೆ ಸಂಗ್ರಹಿಸಿಟ್ಟಿದ್ದ ನಟ ಪಾಟೇಕರ್: ನಟ ನಾನಾ ಪಾಟೇಕರ್ ಬೇಸಿಗೆಯ ಸಮಯದಲ್ಲಿ ತಮ್ಮ ಜಮೀನಿನಿಂದ ಒಲೆಗಾಗಿ ಸ್ವತಃ ಸೌದೆಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು ಮತ್ತು ತಮ್ಮ ಅಂತ್ಯಕ್ರಿಯೆಯನ್ನು ಆ ಸೌದೆಗಳನ್ನೇ ಬಳಸಿ ನೆರವೇರಿಸುವಂತೆ ಸೂಚಿಸಿದ್ದರು. ನಾನಾ ಅವರು ಸಂಗ್ರಹಿಸಿದ್ದ ಸೌದೆಗಳನ್ನು ಈಗ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ತರಲಾಗಿತ್ತು. ಆ ಸೌದೆಗಳನ್ನೇ ಬಳಸಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ.
“ಕ್ರಾಂತಿವೀರ್” ಮತ್ತು “ಖಾಮೋಶಿ: ದಿ ಮ್ಯೂಸಿಕಲ್” ನಂತಹ ವೈವಿಧ್ಯಮಯ ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಹೆಸರುವಾಸಿಯಾದ ಪಾಟೇಕರ್ ಗುರುವಾರ ಮುಂಜಾನೆ ತಮ್ಮ ಗೋವಾ ಮನೆಯಲ್ಲಿ ನಿಧನರಾದರು. ಅವರಿಗೆ ಹೃದಯಾಘಾತವಾಗಿದೆ ಎಂದು ಶಂಕಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
