ಬೆಂಗಳೂರು: ಈಗಾಗಲೇ, ನ್ಯಾಯಾಲಯದಿಂದ ಒಮ್ಮೆ ಜಾಮೀನು ಪಡೆದಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಮತ್ತೊಂದು ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಗುರುವಾರ ನಡೆದ ಅರ್ಜಿ ವಿಚಾರಣೆಯ ವೇಳೆ ಶುಕ್ರವಾರ ಅಂದರೆ ಇಂದು ಮಧ್ಯಾಹ್ನ 3 ಗಂಟೆವರೆಗೆ ಮಾತ್ರವೇ ಜಾಮೀನು ಮಂಜೂರಾಗಿದೆ. 42 ಎಸಿಎಂಎಂ ನ್ಯಾಯಾಲಯದಲ್ಲಿ ಜಾಮೀನು ಷರತ್ತುಗಳನ್ನು ಪೂರೈಸಿ ಹೋಗಿದ್ದ ರೇವಣ್ಣಇಂದು ಮತ್ತೇ ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ.
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ, ಕೆ.ಆರ್.ನಗರದಲ್ಲಿ ದಾಖಲಾಗಿದ್ದ ಮನೆಗೆಲಸದಾಕೆಯ ಅಪಹರಣ ಪ್ರಕರಣದಲ್ಲಿ ರೇವಣ್ಣ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇಡಲಾಗಿತ್ತು. ಈ ವೇಳೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರೇವಣ್ಣ, ಜಾಮೀನು ಪಡೆದು ಮೂರು ದಿನದ ಹಿಂದಷ್ಟೇ ಹೊರಬಂದಿದ್ದರು.
ಇದೀಗ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ, ರೇವಣ್ಣ ಸಂಬಂಧಿಕರೇ ಆದ ಸಂತ್ರಸ್ತೆಯೊಬ್ಬರು ನೀಡಿರುವ ದೂರಿನ ಮೇರೆಗೆ ದಾಖಲಾಗಿರುವ ಪ್ರಕರಣದಲ್ಲಿ ಮತ್ತೇ ಜಾಮೀನು ಪಡೆಯಬೇಕಿದೆ. ಇಲ್ಲವಾದಲ್ಲಿ, ಅವರು ಮತ್ತೇ ಅರೆಸ್ಟ್ ಆಗುವ ಸಾಧ್ಯತೆಯಿತ್ತು. ಹೀಗಾಗಿ, ಜಾಮೀನು ಅರ್ಜಿ ಹಾಕಿದ್ದು, ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಂದು ಮಧ್ಯಾಹ್ನದವರೆಗೆ ಮಧ್ಯಂತರ ಜಾಮೀನು ನೀಡಿದೆ.
ಇಂದು ಮಧ್ಯಾಹ್ನ ನಡೆಯುವ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಎಸ್‌ಐಟಿ ಪರ ವಕೀಲರಾದ ಎಸ್‌ಪಿಪಿ ಜಾಯ್ನಾ ಕೊಥಾರಿ ವಾದ ಮಂಡನೆ ಮಾಡಲಿದ್ದಾರೆ. ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿರುವುದು ಮತ್ತು ಅವರು ಎಸ್‌ಐಟಿ ಕೈಗೆ ಸಿಗದಂತೆ ಕಳ್ಳಾಟ ಆಡುತ್ತಿರುವುದನ್ನೇ ಅಸ್ತ್ರವಾಗಿಟ್ಟುಕೊಂಡು ರೇವಣ್ಣಗೆ ಜಾಮೀನು ನೀಡದಂತೆ ಅವರು ವಾದ ಮಂಡನೆ ಮಾಡಲಿದ್ದಾರೆ ಎಂದು ಹೇಳಲಾಗಿದ್ದು, ನ್ಯಾಯಾಲಯ ಜಾಮೀನು ನೀಡುತ್ತದೆಯೋ ಅಥವಾ ಮರಳಿ ಜೈಲಿಗೆ ಕಳುಹಿಸುತ್ತದೆಯೋ ಕಾದು ನೋಡಬೇಕಿದೆ.