ಹಾಸನ: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಮೈಸೂರಿನ ಕೆ.ಆರ್ ನಗರದಲ್ಲಿ ಮಹಿಳೆಯನ್ನು ಅಪಹರಣ ಮಾಡಿದ ಆರೋಪದ ಜೊತೆ ಈ ಪ್ರಕರಣಕ್ಕೂ ನಂಟಿದೆ ಎನ್ನಲಾಗಿದೆ. ಪ್ರಜ್ವಲ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ, ಸಂತ್ರಸ್ತೆಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ನಂತರ ಸ್ಥಳ ಮಹಜರು ಕೂಡ ಮಾಡಲಾಗಿದೆ.
ಚನ್ನರಾಯಪಟ್ಟಣದ ಗನ್ನಿಕಡ ತೋಟದ ಮನೆಯಲ್ಲಿ ಸ್ಪಾಟ್ ಮಹಜರ್ ಮಾಡಲಾಗಿದೆ. ಸಂತ್ರಸ್ತೆ ಗನ್ನಿಕಡದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಪ್ರಜ್ವಲ್, ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣರನ್ನು ಭಾರತಕ್ಕೆ ಕರೆದೊಂದು ಬಂಧಿಸುವ ವಿಚಾರವಾಗಿ ಎಸ್ಐಟಿ ಕಾರ್ಯ ಪ್ರವೃತ್ತವಾಗಿದೆ. ಕಿಡ್ನಾಪ್ ಪ್ರಕರಣದ ಆರೋಪಿ, ಮಾಜಿ ಸಚಿವ ಹೆಚ್.ಡಿ ರೇವಣ್ಣ ನ್ಯಾಯಾಂಗ ಬಂಧನ ಮುಂದುವರಿದಿದ್ದು, ಜಾಮೀನು ಅರ್ಜಿಯ ವಿಚಾರಣೆ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೇ, ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಗುರುವಾರ ಮಹತ್ವದ ತಿರುವು ದೊರೆತಿತ್ತು. ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಒಬ್ಬರು, ರೇವಣ್ಣ ವಿರುದ್ಧ ದೂರು ನೀಡುವಂತೆ ತಮ್ಮ ಮೇಲೆ ಬಲವಂತ ಮಾಡಲಾಗುತ್ತಿದೆ ಎಂದು ಅಪರಿಚಿತ ವ್ಯಕ್ತಿಗಳ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದರು.
ಈ ವಿಚಾರವಾಗಿ ಮಹಿಳೆಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ರಾಜ್ಯ ಪೊಲೀಸರಿಗೆ ಮಹಿಳಾ ಆಯೋಗ ಸೂಚನೆ ನೀಡಿದೆ. ಇದೆಲ್ಲದರ ಬೆನ್ನಲ್ಲೇ, ಮಹಿಳೆಯರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಬರೆದ ಪತ್ರದ ಬಹಿರಂಗವಾಗಿದೆ.
ಇನ್ನು, ವಿಡಿಯೋ ಲೀಕ್ ಮಾಡಿದವರ ವಿರುದ್ಧ ಹೋರಾಟ ನಡೆಸುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕರು ಎಸ್ಐಟಿಗೆ ದೂರು ನೀಡಿ, ಕುಮಾರಸ್ವಾಮಿ ಸಂತ್ರಸ್ತೆಯರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.