ಬೆಂಗಳೂರು: ಬಿಡಿಎ ತನ್ನ ವ್ಯಾಪ್ತಿಯ ನಿವೇಶನಗಳ ಮಾರಾಟ ಹೆಚ್ಚಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ನಡೆಯಲಿರುವ ವಸ್ತು ಪ್ರದರ್ಶನದಲ್ಲಿ ಮಳಿಗೆ ತೆರೆಯುತ್ತಿದೆ.
ದಸರಾ ವಸ್ತು ಪ್ರದರ್ಶನದಲ್ಲಿ ಅನೇಕ ಇಲಾಖೆಗಳು ಮತ್ತು ನಿಗಮಗಳು ತಮ್ಮ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ನಡೆಸುತ್ತಾ ಬಂದಿವೆ. 90 ದಿನಗಳ ಕಾಲ ಈ ವಸ್ತು ಪ್ರದರ್ಶನ ನಡೆಯಲಿದೆ. ಹೀಗಾಗಿ, ಮೈಸೂರು ದಸರಾಗೆ ಆಗಮಿಸುವ ವಿವಿಧ ಪ್ರದೇಶದ ಜನರನ್ನು ಸೆಳೆಯಲು ದಸರಾ ವಸ್ತು ಪ್ರದರ್ಶನ ಬಹುಮುಖ್ಯ ವೇದಿಕೆಯಾಗಿದೆ. ’
ಇದೇ ಮೊದಲ ಬಾರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ಮಳಿಗೆಯನ್ನು ವಸ್ತು ಪ್ರದರ್ಶನದಲ್ಲಿ ತೆರೆಯುತ್ತಿದೆ. ಆ ಮೂಲಕ ಮೈಸೂರು ದಸರಾ ವೀಕ್ಷಣೆಗೆ ಆಗಮಿಸುವ ಆಸಕ್ತ ಗ್ರಾಹಕರನ್ನು ಬಿಡಿಎ ತನ್ನ ನಿವೇಶನ ಖರೀದಿಯ ಕಡೆಗೆ ಆಕರ್ಷಣೆ ಮಾಡಲು ತೀರ್ಮಾನಿಸಿದೆ.
ಬೃಹತ್ ಮಳಿಗೆಯಲ್ಲಿ ಬಿಡಿಎ ನಿವೇಶನ, ಫ್ಲಾಟ್ಗಳು ಮತ್ತು ವಿಲ್ಲಾಗಳ ಕುರಿತು ಸವಿವರವಾದ ಮಾಹಿತಿಗಳನ್ನು ಅಧಿಕಾರಿಗಳು ಒದಗಿಸಿಕೊಡಲಿದ್ದಾರೆ. ಜತೆಗೆ, ಬಿಡಿಎ ತನ್ನ ವ್ಯಾಪ್ತಿಯ ಬಡಾವಣೆಗಳು, ಪ್ಲಾಟ್ಗಳಿಗೆ ಒದಗಿಸಿರುವ ಮೂಲಸೌಕರ್ಯಗಳ ಕುರಿತು ಪ್ರಾತಕ್ಷಿತೆ ನೀಡಲಿದ್ದಾರೆ.
ಜತೆಗೆ, ಆಸಕ್ತ ಗ್ರಾಹಕರಿಗೆ ಸ್ಥಳದಲ್ಲಿಯೇ ಫ್ಲಾಟ್, ನಿವೇಶನ ಮತ್ತು ವಿಲ್ಲಾ ಹಂಚಿಕೆಯ ಸಂಬಂಧ ಅರ್ಜಿ ಸಲ್ಲಿಸುವುದು ಸೇರಿದಂತೆ ವಿವಿಧ ಪ್ರಕ್ರಿಯೆಗಳನ್ನು ಕುರಿತು ಸವಿವರವಾದ ಮಾಹಿತಿಯನ್ನು ಅಧಿಕಾರಿಗಳು ಇಲ್ಲಿ ಒದಗಿಸಿ ಕೊಡಲಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎ.ಹ್ಯಾರೀಸ್ ಅವರ ದೂರದೃಷ್ಟಿಯ ಫಲವಾಗಿ ಬಿಡಿಎ ದಸರಾ ವಸ್ತು ಪ್ರದರ್ಶನಕ್ಕೆ ಕಾಲಿಟ್ಟಿದ್ದು, ಅಲ್ಲಿಗೆ ಆಗಮಿಸುವ ಆಸಕ್ತ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸದೊಂದು ಹೆಜ್ಜೆಯನ್ನಿಟ್ಟಿದೆ ಎನ್ನಬಹುದು.
