ಬೆಂಗಳೂರು: ಜಿಮ್ ಟ್ರೈನರ್ ಮೇಲೆ ಹಲ್ಲೆಗೈದು ಸಾವಿಗೆ ಕಾರಣವಾದ ಪ್ರಕರಣ ಶನಿವಾರ ರಾತ್ರಿ ಹೆಬ್ಬಾಳದ ಕೆಂಪಾಪುರದಲ್ಲಿ ಘಟನೆ ನಡೆದಿದ್ದು, ಮೃತನನ್ನು ನಂದನ್ (25) ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮೃತ ನಂದನ್‌ನ ಸಹೋದ್ಯೋಗಿಗಳಾದ ವಿಶ್ವ, ಶರತ್ ಹಾಗೂ ನಿಶಾಂತ್ ಎಂಬ ಮೂವರ ವಿರುದ್ಧ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಹಕಾರ ನಗರದಲ್ಲಿರುವ ‘ಮ್ಯಾಸಿವ್ ಜಿಮ್’ನಲ್ಲಿ ನಂದನ್ ಜಿಮ್ ಹಾಗೂ ಪರ್ಸನಲ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ. ಶನಿವಾರ ಜಿಮ್‌ನ ಮೊದಲ ವರ್ಷದ ವಾರ್ಷಿಕೋತ್ಸವ ಹಾಗೂ ಅವಾರ್ಡ್ ಸೆರೆಮನಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಮುಗಿದ ಬಳಿಕ, ತಡವಾದರೆ ಬೆಳಗ್ಗೆ ಬರುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದ ನಂದನ್, ಜಿಮ್‌ನ ಇತರೆ ಸಿಬ್ಬಂದಿ ಹಾಗೂ ಸ್ನೇಹಿತರ ಜೊತೆ ತೆರಳಿದ್ದ.
ಅನುಶ್ ಎಂಬಾತನಿಗೆ ನಂದನ್ ಪರ್ಸನಲ್ ಟ್ರೈನರ್ ಆಗಿ ತರಬೇತಿ ನೀಡುತ್ತಿದ್ದ. ಕಾರ್ಯಕ್ರಮ ಮುಗಿದ ನಂತರ ನಂದನ್, ವಿಶ್ವ, ಶರತ್ ಮತ್ತು ನಿಶಾಂತ್ ಸೇರಿ ಅನುಶ್ ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ಪಾರ್ಟಿ ಮಾಡಲು ಹೋಗಿದ್ದರು. ಅಪಾರ್ಟ್‌ಮೆಂಟ್‌ನಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ನಂದನ್ ಮತ್ತು ಇತರರ ನಡುವೆ ವೈಯಕ್ತಿಕ ಕಾರಣಕ್ಕೆ ತೀವ್ರ ಗಲಾಟೆಯಾಗಿದೆ. ಈ ವೇಳೆ ಆತನ ಸಹೋದ್ಯೋಗಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ನಂದನ್‌ನನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ, ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಕುರಿತು ಮಾಹಿತಿ ನೀಡಿರುವ ಈಶಾನ್ಯ ವಿಭಾಗದ ಡಿಸಿಪಿ ಜಿ.ಕೆ ಮಿಥುನ್ ಕುಮಾರ್, ಆರೋಪಿಗಳು ಹಾಗೂ ನಂದನ್ ಒಂದೇ ಜಿಮ್‌ನಲ್ಲಿ ಕೆಲಸ ಮಾಡುತ್ತಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಈ ಹತ್ಯೆ ನಡೆದಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಈಗಾಗಲೇ ಪ್ರಕರಣಕ್ಕೆ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
