ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 18 ಶನಿವಾರ ರಾತ್ರಿ 7:30 ರಿಂದ ಆರ್.ಸಿ.ಬಿ ಮತ್ತು ಸಿ.ಎಸ್.ಕೆ ತಂಡಗಳ ನಡುವೆ ನಿರ್ಣಾಯಕ ಐಪಿಎಲ್ ಪಂದ್ಯ ನಡೆಯಲಿದೆ.
ಆದರೆ ಈಗಾಗಲೇ ಹವಾಮಾನ ಇಲಾಖೆ ತಿಳಿಸಿರುವಂತೆ ಶನಿವಾರ ಬೆಂಗಳೂರಿನಲ್ಲಿ ಭಾರಿ ಮಳೆ ಸುರಿಯುವ ಕಾರಣ ಮಹತ್ವದ ಈ ಐಪಿಎಲ್ ಪಂದ್ಯ ರದ್ದಾಗುವ ಭೀತಿ ಇದೆ. ಒಂದು ವೇಳೆ ಅಂದು 20 ಓವರುಗಳ ಪಂದ್ಯ ನಡೆದರೆ ಆಗ ಏನಾದರೂ ಆರ್.ಸಿ.ಬಿ ತಂಡ ಮೊದಲು ಬ್ಯಾಟಿಂಗ್ ನಡೆಸಿದರೆ ಅದು 200 ರನ್ ಗುರಿ ನೀಡಬೇಕು ಮತ್ತು ಚೆನ್ನೈ ತಂಡವನ್ನು 182 ರನ್ ಗಳ ಒಳಗೆ ನಿಯಂತ್ರಿಸಬೇಕು. ಅಂದರೆ 18 ರನ್ ಗಳ ಅಂತರದಿಂದ ಆರ್.ಸಿ.ಬಿ ಗೆಲ್ಲಬೇಕು. ಹೀಗೆ ಮಾಡಿದರೆ ಬೆಂಗಳೂರು ತಂಡ 4ನೇ ತಂಡವಾಗಿ ಪ್ಲೇ-ಆಫ್ ಪ್ರವೇಶಿಸಲು ಅವಕಾಶ ಇದೆ.
ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಏನಾದರೂ 2ನೇ ಸರದಿಯಲ್ಲಿ ಬ್ಯಾಟಿಂಗ್ ನಡೆಸಿದರೆ 201 ರನ್ ಗಳ ಅಂದಾಜು ಟಾರ್ಗೆಟ್ ಅನ್ನು 11 ಎಸೆತಗಳು ಇನ್ನೂ ಬಾಕಿ ಇರುವಂತೆಯೇ ತಲುಪಿ ಜಯ ಗಳಿಸಬೇಕು. ಹೀಗೆ 18.1 ಓವರ್ ಗಳಲ್ಲಿ 201 ರನ್ ಗಳನ್ನು ಗಳಿಸಿ ಗೆದ್ದರೆ ಆಗ ಪ್ಲೇ-ಆಫ್ ಪ್ರವೇಶಿಸಲು ಅವಕಾಶ ಇದೆ.
ಸದ್ಯ ಬೆಂಗಳೂರು ತಂಡದ ರನ್ ರೇಟ್ ಚೆನ್ನೈ ತಂಡದ ರನ್ ರೇಟ್ ಗಿಂತ ಕಡಿಮೆ ಇರುವುದೇ ಈ ಲೆಕ್ಕಾಚಾರಕ್ಕೆ ಕಾರಣವಾಗಿದೆ.