ಈ ನೇತ್ರಾಣಿ ದ್ವೀಪ ಅರಬ್ಬೀ ಸಮುದ್ರದಲ್ಲಿರುವ ಒಂದು ದ್ವೀಪ. ನೇತ್ರಾಣಿ ದ್ವೀಪವನ್ನು ಪಾರಿವಾಳ ದ್ವೀಪ ಎಂದೂ ಕೂಡ ಕರೆಯಲಾಗುತ್ತದೆ. ಈ ದ್ವೀಪ ಮುರುಡೇಶ್ವದಿಂದ ಸುಮಾರು 10 ಕಿ.ಮೀ ದೂರದಲ್ಲಿದ್ದು ಕರ್ನಾಟಕದ ಕರಾವಳಿ ಪ್ರದೇಶದಲ್ಲಿದೆ. ಸಮುದ್ರ ತೀರದಿಂದ ಸುಮಾರು 15 ನಾಟಿಕಲ್ ದೂರದಲ್ಲಿರುವ ಈ ನೇತ್ರಾಣಿ ದ್ವೀಪಕ್ಕೆ ತಲುಪಲು ಕನಿಷ್ಟ ನಾಲ್ಕೈದು ಗಂಟೆಗಳು ದೋಣಿಯ ಪ್ರಯಾಣ ಮಾಡಬೇಕು.
ಈ ದ್ವೀಪದಲ್ಲಿ ಪಾರಿವಾಳ ಮತ್ತು ಕಾಡು ಮೇಕೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ . ಜತೆಗೆ ಇಲ್ಲಿ ಪಾರಿವಾಳಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ಈ ದ್ವೀಪವನ್ನು ಪಾರಿವಾಳ ದ್ವೀಪ ಎಂದು ಸಹ ಕರೆಯಲಾಗುತ್ತದೆ .
ಇದೊಂದು ಸಮುದ್ರದ ನಡುವೆ ಇರುವ ದ್ವೀಪ. ನೇತ್ರಾಣಿ ದ್ವೀಪವು ಹೃದಯಾಕಾರವಿದ್ದು ನೋಡಲು ಸುಂದರವಾಗಿದೆ.
ಅಂಡಮಾನ್ ನಿಕೋಬಾರ್, ಲಕ್ಷದ್ವೀಪಗಳಂತೆ ಇದೊಂದು ದ್ವೀಪ. ಲಕ್ಷದ್ವೀಪ , ಅಂಡಮಾನ್ ನಿಕೋಬಾರ್ ದ್ವೀಪಗಳನ್ನು ನೋಡಲು ಯಾರಿಗು ಯಾವ ಅಡ್ಡಿಗಳಿಲ್ಲ ಆದರೆ ಈ ನೇತ್ರಾಣಿ ದ್ವೀಪಕ್ಕೆ ಹೋಗುವುದು ಅಷ್ಟು ಸುಲಭವಲ್ಲ. ಯಾಕಂದ್ರೆ ಈ ಪ್ರದೇಶಕ್ಕೆ ಕೇವಲ ಕರ್ನಾಟಕ ಕರಾವಳಿಯ ಎರಡು ಜಿಲ್ಲೆಗಳಾದ ಉಡುಪಿ ಮತ್ತು ಉತ್ತರ ಕನ್ನಡ ಜನರಿಗೆ ಮಾತ್ರ ಅವಕಾಶವಿದೆ.
ನೇತ್ರಾಣಿ ದ್ವೀಪಕ್ಕೆ ಹೋಗುವ ದಾರಿ
ನೇತ್ರಾಣಿಗೆ ಗೋವಾ, ಮುಂಬೈ ಮತ್ತು ಬೆಂಗಳೂರಿಂದ ಸುಲಭವಾಗಿ ಹೋಗಬಹುದು.
ಸ್ಕೂಬಾ ಡೈವಿಂಗ್
ಈ ದ್ವೀಪ ಸ್ಕೂಬಾ ಡೈವಿಂಗ್ ನಡೆಸಲು ಸೂಕ್ತವಾಗಿದೆ. ಸ್ಕೂಬಾ ಡೈವಿಂಗ್ ಮಾಡುವುದಕ್ಕಾಗಿ ಇಲ್ಲಿಗೆ ಹೆಚ್ಚಿನ ಪ್ರವಾಸಿಗಳು ಬರುತ್ತಾರೆ. ಇನ್ನೂ ಗೋವಾದಲ್ಲಿ ಈ ಸ್ಕಾಬಾ ಡೈವಿಂಗ್ ನಡೆಸುವ ಅನೇಕ ಕಾರ್ಯಾಗಾರಗಳು ಇವೆ. ಈ ದ್ವೀಪದಲ್ಲಿ ಚೂಪಾದ ಬಂಡೆಗಳು ಮತ್ತು ಕಡಿದಾದ(ಕಷ್ಟಕರವಾದ) ಕಮರಿಗಳು ಇದ್ದು, ಪ್ರವಾಸಿಗಳು ದ್ವೀಪವನ್ನು ಹತ್ತದೇ, ದುಮುಕುವುದು ಮತ್ತು ಸ್ಕೂಬಾ ಡೈವಿಂಗ್ ಮಾಡಲು ಇಷ್ಟಪಡುತ್ತಾರೆ. ಈ ದ್ವೀಪ ಪರಿಣಿತ ಈಜುಗಾರರಿಗೆ ಹೆಚ್ಚು ಸೂಕ್ತವಾಗಿದೆ.
ದ್ವೀಪದ ಆಕರ್ಷಣೆ
ನೇತ್ರಾಣಿಯು ಹವಳದ ದ್ವೀಪ ಎಂದು ಕೂಡ ಹೆಸರುವಾಸಿಯಾಗಿದೆ. ಈ ದ್ವೀಪದಲ್ಲಿ ಹವಳಗಳು, ಚಿಟ್ಟೆ ಮೀನು, ಬಂದೂಕು ಮೀನು, ಗಿಳಿ ಮೀನು, ಹಾವು ಮೀನು ಮತ್ತು ಸೀಗಡಿ ಮೀನುಗಳು ಹೆಚ್ಚಾಗಿ ಕಂಡುಬುರುತ್ತವೆ.
ಅನುಮತಿಬೇಕು
ನೇತ್ರಾಣಿಯ ಪಕ್ಕದಲ್ಲಿ ಒಂದು ದ್ವೀಪವಿದ್ದು ಈ ದ್ವೀಪವನ್ನು ಭಾರತೀಯ ನೌಕಾಪಡೆಯಿಂದ ಗುರಿ ಅಭ್ಯಾಸಕ್ಕಾಗಿ ಬಳಸುತ್ತಾರೆ. ಗುರಿ ಅಭ್ಯಾಸ ಮಾಡುವುದರಿಂದ ಇಲ್ಲಿ ಖಾಲಿ ಗುಂಡುಗಳನ್ನು ನೇತ್ರಾಣಿ ಮತ್ತು ಪಕ್ಕದ ದ್ವೀಪದಲ್ಲಿ ಕಾಣಬಹುದು. ಮುಖ್ಯವಾಗಿ ನೇತ್ರಾಣಿ ದ್ವೀಪ ನೋಡಲು ಯಾರು ಬೇಕಾದರು ಹೋಗುವ ಅವಕಾಶವಿಲ್ಲ ಇಲ್ಲಿಗೆ ಅನುಮತಿ ಇದ್ದವರು ಮಾತ್ರ ಹೋಗಲು ಸಾಧ್ಯ, ನೇತ್ರಾಣಿಯನ್ನು ನೋಡ ಬಯಸುವವರು ನೌಕಾಪಡೆ ಮತ್ತು ತಹಶೀಲ್ದಾರ್ ಅನುಮತಿ ಕಡ್ಡಾಯವಾಗಿ ಪಡೆಯಲೆಬೇಕು. ಜತೆಗೆ ಈ ಅನುಮತಿ ಎಲ್ಲರಿಗೂ ಸಿಗುವುದಿಲ್ಲ. ಅದೃಷ್ಟ ಇದ್ದವರು ಮಾತ್ರ ಈ ದ್ವೀಪವನ್ನು ನೋಡಬಹುದು.
ಪ್ರವಾಸದ ಅವಕಾಶ ಯಾರಿಗಿದೆ ?
ಈ ದ್ವೀಪವನ್ನು ನೋಡಲು ಮೀನುಗಾರ ಕುಟುಂಬಗಳ ಪ್ರವಾಸಕ್ಕೆ ಸೀಮಿತ. ನೇತ್ರಾಣಿ ದ್ವೀಪದಲ್ಲಿ ಕೇವಲ ಒಂದು ಬೆಟ್ಟ ಮಾತ್ರ ಇದೆ. ಇಲ್ಲಿಗೆ ಎಲ್ಲರೂ ಹೋಗಲು ನೌಕಾಸೇನೆ ಅವಕಾಶ ಕೊಡುವುದಿಲ್ಲ. ಕೇವಲ ಮೀನುಗಾರರ ಕುಟುಂಬಗಳಿಗೆ ಮಾತ್ರ ಜಟ್ಟಿಗೇಶ್ವರನಿಗೆ ಮಾತ್ರ ಪೂಜಿಸಲು ಅವಕಾಶವಿದೆ. ಜತೆಗೆ ಮಳೆಗಾಲದಲ್ಲಿ ಬೆಟ್ಟ ಅಪಾಯದಲ್ಲಿರುತ್ತದೆ ಈ ಕಾರಣಕ್ಕಾಗಿ ಜನರ ರಕ್ಷಣಾ ದೃಷ್ಟಿಯಿಂದ ಕೇವಲ ಡಿಸೆಂಬರ್, ಜನವರಿ , ಫೆಬ್ರವರಿ , ಮಾರ್ಚ್ ನಲ್ಲಿ ಮೀನಿಗಾರರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
ಇನ್ನು ಮೀನುಗಾರರಾದ ಖಾರ್ವಿ, ಮೊಗವೀರ ಸಮುದಾಯದ ಜನರು ವರ್ಷಕ್ಕೆ ಒಮ್ಮೆ ಮಾತ್ರ ನೇತ್ರಾಣಿ ದ್ವೀಪಕ್ಕೆ ಪ್ರವೇಶಕ್ಕೆ ಅವಕಾಶವಿದೆ. ಅದರಲ್ಲು ಇಲ್ಲಿ ಮೋಜು ಮಸ್ತಿಗೆ ಅವಕಾಶವಿಲ್ಲ. ತಲೆತಲಾಂತರಗಳಿಂದ ಈ ದ್ವೀಪದಲ್ಲಿ ದರ್ಗಾ, ಕ್ರಿಸ್ತನ ಶಿಲುಬೆ ಜೊತೆಗೆ ಮೀನುಗಾರರ ಆರಾಧ್ಯ ಧೈವ ಜಟ್ಟಿಗೇಶ್ವ ದೇವರಿದ್ದು, ವರ್ಷಕ್ಕೆ ಒಮ್ಮೆ ನೇತ್ರಾಣಿ ದ್ವೀಪಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬರುತ್ತಾರೆ.
ಒಟ್ಟಾರೆ ಈ ನೇತ್ರಾಣಿ ಎಂಬ ಪುಟ್ಟ ದ್ವೀಪವನ್ನು ನೋಡುವುದು ಕಷ್ಟಕ್ಕಿದೆ. ದುಡ್ಡಿದ್ದರೆ ಎಂತಹ ದ್ವೀಪವನ್ನಾದರು ನೋಡಬಹುದು. ಆದರೆ ಈ ದ್ವೀಪವನ್ನು ನೋಡುವುದು ಅಷ್ಟು ಸುಲಭವಲ್ಲ. ಕೇವಲ 10 ರಿಂದ 15 ಎಕರೆ ವಿಸ್ತೀರ್ಣದ ಭೂಪ್ರದೇಶ ವೀಕ್ಷಣೆ ಮಾಡಲು ಸೇನಾಪಡೆಯಿಂದ ಅನುಮತಿಬೇಕು. ಈ ಅನುಮತಿ ಅಷ್ಟು ಸುಭವಾಗಿ ಯಾರಿಗು ಸಿಗುವುದಿಲ್ಲ. ಹೀಗಾಗಿ ನೇತ್ರಾಣಿ ದ್ವೀಪ ಎಲ್ಲರಿಗೂ ನೋಡಲು ಸಿಗುವುದಿಲ್ಲ.