ಬೆಂಗಳೂರು: ಅಮೇರಿಕ ಮತ್ತು ವೆಸ್ಟ್ ಇಂಡೀಸ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಸ್ಕಾಟ್ ಲ್ಯಾಂಡ್ ತಂಡದ ಪಾಯೋಕತ್ವ ಪಡೆಯುವ ಮೂಲಕ ಕನ್ನಡಿಗರ ಹೆಮ್ಮೆಯ ನಂದಿನಿ ವಿಶ್ವದೆಲ್ಲೆಡೆ ರಾರಾಜಿಸುವಂತಾಗಿದೆ.
ವಿಶ್ವಕಪ್ ನಲ್ಲಿ ಭಾಗವಹಿಸುವ ಸ್ಕಾಟ್ ಲ್ಯಾಂಡ್ ತಂಡದ ಪ್ರಮುಖ ಪ್ರಾಯೋಜಕರಾಗಿ ನಂದಿನಿ ಸಂಸ್ಥೆ ಗುರುತಿಸಿಕೊಂಡಿದೆ. ಸ್ಕಾಟ್ ಲ್ಯಾಂಡ್ ತಂಡದ ಆಟಗಾರರ ಜರ್ಸಿ ಮೇಲೆ ಕನ್ನಡಿಗರ ಹೆಮ್ಮೆ ನಂದಿನ ಲೋಗೋ ಕನ್ನಡದಲ್ಲಿಯೇ ಪ್ರಿಂಟ್ ಆಗಿದೆ. ಆ ಮೂಲಕ ಇಡೀ ವಿಶ್ವವೇ ನೋಡುವ ಕ್ರಿಕೆಟ್ ಆಟದಲ್ಲಿ ಕನ್ನಡದ ಕಂಪು ಹರಿಯುವಂತೆ ಕೆಎಂಎಫ್ ಮಾಡಿದೆ.
ನಂದಿನಿ ಬ್ರ್ಯಾಂಡ್ ಮೂಲಕ ಈಗಾಗಲೇ ಮನೆ ಮಾತಾಗಿದೆ. ದೇಶ ವಿದೇಶಗಳಲ್ಲಿ ಬ್ರ್ಯಾಂಚ್ ತೆರೆದು, ಸಿಹಿತಿನಿಸುಗಳನ್ನು ಒದಗಿಸುತ್ತಿದೆ. ಆದರೆ, ಮೊಟ್ಟಮೊದಲ ಬಾರಿಗೆ ಕ್ರಿಕೆಟ್ ತಂಡದ ಪ್ರಾಯೋಜಕತ್ವ ವಹಿಸಿಕೊಂಡಿದೆ. ಅದರಲ್ಲೂ ಲೋಗೋವನ್ನು ಕನ್ನಡದಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡವೊಂದರ ಜರ್ಸಿ ಮೇಲೆ ಪ್ರಿಂಟ್ ಹಾಕುವ ಮೂಲಕ ಕನ್ನಡಿಗರ ಮನ ಗೆದ್ದಿದೆ.
ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು, ಕನ್ನಡಪರ ಹೋರಾಟಗಾರರು ಸ್ಕಾಟ್ ಲ್ಯಾಂಡ್ ತಂಡದ ಜರ್ಸಿಯನ್ನು ಹಂಚಿಕೊಂಡು ಖುಷಿಪಟ್ಟಿದ್ದಾರೆ. ಕನ್ನಡದ ಕಂಪನ್ನು ವಿಶ್ವಕಪ್ ಪಂದ್ಯಾವಳಿಯಲ್ಲಿ ಹರಡಲು ಸಜ್ಜಾಗಿರುವ ನಂದಿನಿಯನ್ನು ಹಾಡಿ ಹೊಗಳಿದ್ದಾರೆ. ಈ ಬಗ್ಗೆ ಸಾವಿರಾರು ಟ್ವೀಟ್ ಗಳು ಆಗಿದ್ದು, ಲಕ್ಷಾಂತರ ಜನ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಂದಿನಿ ಉತ್ಪನ್ನಗಳು ಸಿಗದಂತೆ ಮಾಡಿ, ಆ ಜಾಗದಲ್ಲಿ ಅಮುಲ್ ಉತ್ಪನ್ನಗಳ ಮಾರಾಟಕ್ಕೆ ವ್ಯಾಪಕ ಪ್ರಯತ್ನ ನಡೆಯುತ್ತಿತ್ತು. ನಂದಿನಿಯನ್ನು ಅಮುಲ್ ಜತೆಗೆ ವಿಲೀನ ಮಾಡುವ ಕುರಿತು ನಡೆದಿರುವ ಹುನ್ನಾರದ ಬಗ್ಗೆ ಕನ್ನಡಿಗರೆಲ್ಲ ಒಟ್ಟಾಗಿ ಹೋರಾಟ ನಡೆಸಿ, ನಂದಿನಿ ಉಳಿಸುವ ಸಲುವಾಗಿ ಪ್ರಯತ್ನಿಸಿದ್ದರು. ಅದರ ಫಲವಾಗಿ ಇಂದು ನಂದಿನಿ ವಿಶ್ವಮಟ್ಟದ ಬ್ರ್ಯಾಂಡ್ ಆಗಿ ಬೆಳೆದಿದೆ ಎನ್ನಬಹುದು.