ಬೆಂಗಳೂರು : ಕಾಮೆಡ್ ಕೆ ಯುಜಿಇಟಿ 2024 ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳದೇ ಸಿಂಹಪಾಲು. ಮೊದಲ ಹತ್ತು ರ‍್ಯಾಂಕ್‌ಗಳ ಎಂಟು ರ‍್ಯಾಂಕ್ ಬೆಂಗಳೂರು ವಿದ್ಯಾರ್ಥಿಗಳ ಪಾಲಾಗಿದೆ.
ಎರಡನೇ ಸ್ಥಾನವನ್ನು ಹಿಮಾಚಲ ಪ್ರದೇಶ ಮತ್ತು ಆಂಧ್ರಪ್ರದೇಶದ ವಿದ್ಯಾರ್ಥಿಗಳು ಪಡೆದಿದ್ದಾರೆ. ಕರ್ನಾಟಕದ ವೈದ್ಯಕೀಯ ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟ ಶುಕ್ರವಾರ ಕಾಮೆಡ್-ಕೆ ಯುಜಿಇಟಿ ಫಲಿತಾಂಶವನ್ನು ಪ್ರಕಟಿಸಿದೆ. ಬೆಂಗಳೂರಿನ ಬಾಲಸತ್ಯ ಸರವಣನ್ ಮೊದಲ ರ‍್ಯಾಂಕ್ ಪಡೆದಿದ್ದು, ಎರಡು ಮತ್ತು ಮೂರನೇ ರ‍್ಯಾಂಕ್ ಕ್ರಮವಾಗಿ ದೇವಾಂಶ್ ತ್ರಿಪಾಠಿ ಮತ್ತು ಸನಾ ತಬಸ್ಸುಮ್ ಪಾಲಾಗಿದೆ.
ರಾಜ್ಯದ ಇತರೆ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳೆಂದರೆ, ಪ್ರಕೇತ್ ಗೋಯೆಲ್ ರ‍್ಯಾಂಕ್ 4), ನಿಕೇತ್ ಪ್ರಕಾಶ್ ಅಚಂತಾ ರ‍್ಯಾಂಕ್ 7), ನೇಹಾ ಪ್ರಭು ರ‍್ಯಾಂಕ್ 8), ಜಗದೀಶ್ ರೆಡ್ಡಿ ಮಾರ್ಲಾ ರ‍್ಯಾಂಕ್ 9) ಮತ್ತು ಈಶ್ವರಚಂದ್ರ ರೆಡ್ಡಿ ಮುಲ್ಕಾ 10 ನೇ ರ‍್ಯಾಂಕ್ ಪಡೆದಿದ್ದಾರೆ. ಪಾಸ್ ಆದ 10,575 ಅಭ್ಯರ್ಥಿಗಳು 90 ರಿಂದ 100 ರಷ್ಟು ಪರ್ಸೆಂಟೈಸ್ ಪಡೆದಿದ್ದಾರೆ. ಈ ಪೈಕಿ 3126 ಅಭ್ಯರ್ಥಿಗಳು ಕರ್ನಾಟಕದವರು ಎಂಬುದು ವಿಶೇಷ.
10,578 ಅಭ್ಯರ್ಥಿಗಳು 80 ರಿಂದ 90 ಪರ್ಸೆಂಟೈಸ್ ಪಡೆದಿದ್ದು, ಇದರಲ್ಲಿ 2,749 ಅಭ್ಯರ್ಥಿಗಳು ಕರ್ನಾಟಕದವರು. ಮೊದಲ 100 ರ‍್ಯಾಂಕ್ ಪಡೆದವರಲ್ಲಿ 58 ವಿದ್ಯಾರ್ಥಿಗಳು ಕರ್ನಾಟಕದವರಾಗಿದ್ದಾರೆ. ಕಾಮೆಡ್ ಕೆ ವೆಬ್‌ಸೈಟ್ (www.comedk.org)ನಲ್ಲಿ ಲಾಗಿನ್ ಮಾಡಿ ಅಭ್ಯರ್ಥಿಗಳು ಫಲಿತಾಂಶ ನೋಡಬಹುದು.