ಆನೇಕಲ್: ಖಾಸಗಿ ಕಾಲೇಜಿನ ಆಡಳಿತ ಮಂಡಳಿಯ ಕಿರುಕುಳಕ್ಕೆ ಬೇಸತ್ತು ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್ ಸಮೀಪದ ಹೀಲಲಿಗೆಯಲ್ಲಿ ನಡೆದಿದೆ.
ಹೀಲಲಿಗೆಯಲ್ಲಿರುವ ಬೆಂಗಳೂರು ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಬ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ಹಾಸನ ಜಿಲ್ಲೆ ಅರಸೀಕೆರೆ ಮೂಲದ ವಿದ್ಯಾರ್ಥಿನಿ ಹರ್ಷಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗುರುವಾರ ಸಂಜೆ ಕಾಲೇಜಿನ ಹಾಸ್ಟೆಲ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿತ್ತು.
ಆತ್ಮಹತ್ಯೆಗೆ ನಿಖರವಾದ ಕಾರಣ ಗೊತ್ತಿಲ್ಲವಾದರೂ, ಹಾಸ್ಟೆಲ್ ಮತ್ತು ಕಾಲೇಜು ಆಡಳಿತ ಮಂಡಳಿಯ ಕಿರುಕುಳವೇ ಆಕೆಯ ಸಾವಿಗೆ ಕಾರಣ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಜಮಾವಣೆಗೊಂಡು, ಆಡಳಿತ ಮಂಡಳಿ ವಿರುದ್ಧ ದಿಕ್ಕಾರ ಕೂಗಿ, ಯುವತಿಯ ಸಾವಿಗೆ ನ್ಯಾಯ ಒದಗಿಸುವಂತೆ ಒತ್ತಾಯ ಮಾಡಿದ್ದಾರೆ.
ವಿದ್ಯಾರ್ಥಿಯ ಪೋಷಕರು ಅರಸೀಕರೆ ಮೂಲದವರಾಗಿದ್ದು, ಎಂಜಿನಿಯರಿಂಗ್ ಓದುವ ಸಲುವಾಗಿ ತಮ್ಮ ಮಗಳನ್ನು ಕಾಲೇಜಿಗೆ ಸೇರಿಸಿದ್ದರು. ಶುಲ್ಕ ಸೇರಿದಂತೆ ಯಾವೊಂದು ವಿಚಾರದಲ್ಲಿಯೂ ನಾವು ಕಡಿಮೆ ಮಾಡಿರಲಿಲ್ಲ. ಆದರೆ, ಇದಕ್ಕಿದ್ದಂತೆ ಏಕೆ ಹೀಗೆ ಮಾಡಿಕೊಂಡಿದ್ದಾಳೆ ಎಂಬುದು ಗೊತ್ತಾಗುತ್ತಿಲ್ಲ, ಆದರೆ, ವಿದ್ಯಾರ್ಥಿಗಳು ಮತ್ತು ಆಕೆಯ ಸ್ನೇಹಿತರು ಹೇಳುವ ಪ್ರಕಾರ ಕಾಲೇಜು ಆಡಳಿತ ಮಂಡಳಿ ಕಿರುಕುಳ ಎನ್ನುತ್ತಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಆಕೆಯ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.