ದಾವಣಗೆರೆ: ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಕೊಲೆ ಆರೋಪಿ ವಿಶ್ವ ಆಲಿಯಾಸ್ ಗಿರೀಶ್ ಮೇಲೆ ದಾವಣಗೆರೆಯ ರೈಲ್ವೇ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ಮಂಗಳವಾರ ಬೆಳಗಿನ ಜಾವ ೫.೩೦ ಸುಮಾರಿನಲ್ಲಿ ಅಂಜಲಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ವಿಶ್ವ ಆಲಿಯಾಸ್ ಗಿರೀಶ್, ಗುರುವಾರ ರಾತ್ರಿ ದಾವಣಗೆಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಆತ ಪೊಲೀಸರ ಕೈಗೆ ಸಿಗುವ ಮೊದಲು ರೈಲಿನಲ್ಲಿ ಕಿರಿಕ್ ಮಾಡಿಕೊಂಡು, ರಐಲಿನಿಂದ ಆಚೆಗೆ ಧುಮುಕ್ಕಿದ್ದ ಎನ್ನಲಾಗುತ್ತಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಆತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮೈಸೂರಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ವಿಶ್ವಮಾನವ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಆರೋಪಿ ಗಿರೀಶ್, ರೈಲಿನಲ್ಲಿದ್ದ ಪ್ರಯಾಣಿಕರ ಜತೆಗೆ ಕಿರಿಕ್ ಮಾಡಿಕೊಂಡಿದ್ದ. ಗದಗ ಮೂಲದ ಮಹಾಂತೇಶ್ ಎಂಬುವವರ ಪತ್ನಿ ಜತೆಗೆ ಜಗಳ ಮಾಡಿಕೊಂಡ ಆತ, ಆಕೆಗೆ ಚಾಕುವಿನಿಂದ ಇರಿಯಲು ಮುಂದಾಗಿದ್ದ. ಇದರಿಂದ ರೊಚ್ಚಿಗೆದ್ದ ಪ್ರಯಾಣಿಕರು ಆತನ ಮೇಲೆ ಹಲ್ಲೆ ನಡೆಸಿ, ಪೊಲೀಸರಿಗೆ ಹಿಡಿದುಕೊಡಲು ಮುಂದಾಗಿದ್ದರು. ಆಗ ಆತ ರೈಲಿನಿಂದ ಧುಮುಕಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದ.
ಇದೀಗ ಹುಬ್ಬಳ್ಳಿ ಪೊಲೀಸರ ಕೈಗೆ ಸಿಕ್ಕಿ, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿಯ ವಿರುದ್ಧ ಮಹಾಂತೇಶ್ ದೂರು ನೀಡಿದ್ದು, ತಮ್ಮ ಮಡದಿ ಜತೆಗೆ ಅಸಭ್ಯವಾಗಿ ವರ್ತಿಸುವ ಜತೆಗೆ ಚಾಕುವಿನಿಂದ ತಿವಿಯಲು ಬಂದಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ದಾವಣಗೆರೆ ರೈಲ್ವೆ ಪೊಲೀಸರು ಆತನ ವಿರುದ್ಧ ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ.