ಅಪರಾಧ ಸಿನಿಮಾ ಸುದ್ದಿ

Renukaswamy murder case: ರೇಣುಕಾಸ್ವಾಮಿ ಕೊಲೆ ಕೇಸ್​: ಮಾಫಿ ಸಾಕ್ಷಿ ಪರಿಗಣನೆ ಪ್ರಶ್ನಿಸಿ ಸಲ್ಲಿಸಿದ್ದ ದರ್ಶನ್ ಅರ್ಜಿ ವಜಾ

Share It

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಗಳನ್ನು ಪರಿಗಣಿಸುವ ಸಂದರ್ಭದಲ್ಲಿ ಆರೋಪಿ ದರ್ಶನ್ ವಾದಕ್ಕೆ ಅನುಮತಿ ನೀಡದ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ರದ್ದುಪಡಿಸಿದೆ.

ನಟ ದರ್ಶನ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಅರ್ಜಿ ವಜಾಗೊಳಿಸಿ ಆದೇಶ ನೀಡಿದೆ. ಅಲ್ಲದೆ, ಮಾಫಿ ಸಾಕ್ಷಿಯಾಗಿಸಿದ ನಂತರ ಪ್ರಕ್ರಿಯೆ ಲೋಪ ಪ್ರಶ್ನಿಸಬಹುದಾಗಿದೆ. ಆದರೆ, ಮಾಫಿ ಸಾಕ್ಷಿಯನ್ನು ಆಕ್ಷೇಪಿಸುವುದಕ್ಕೆ ಸಹ ಆರೋಪಿಗಳಿಗೆ ಅಧಿಕಾರವಿಲ್ಲ. ಇದೇ ರೀತಿಯಲ್ಲಿ ವಿನಯ್ ಕುಲಕರ್ಣಿ ಪ್ರಕರಣದಲ್ಲಿ ಮಾಫಿ ಸಾಕ್ಷಿ ಹೇಳಿಕೆ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ಈ ಹಂತದಲ್ಲಿ ನೈಸರ್ಗಿಕ ನ್ಯಾಯ ಪ್ರಕ್ರಿಯೆ ಅನ್ವಯವಾಗುವುದಿಲ್ಲ. ಆದ್ದರಿಂದ ಅರ್ಜಿದಾರರ ವಾದ ಒಪ್ಪುವುದಕ್ಕೆ ಸಾಧ್ಯವಿಲ್ಲ. ಈ ರೀತಿ ಪ್ರಕರಣಗಳಲ್ಲಿ ಸಹ ಆರೋಪಿಗೆ ಆಕ್ಷೇಪದ ಅವಕಾಶ ನೀಡಿದರೆ ಪ್ರಕ್ರಿಯೆ ಮುಗಿಯುವುದಿಲ್ಲ. ಮಾಫಿ ಸಾಕ್ಷಿಯನ್ನಾಗಿಸಲು ಕೋರ್ಟ್ ಒಪ್ಪಿದ ಬಳಿಕವಷ್ಟೇ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮಾಫಿ ಸಾಕ್ಷಿಯಾಗುವಂತೆ ಕೋರಿರುವ ಅರ್ಜಿ ಪ್ರತಿಯನ್ನು ಅರ್ಜಿದಾರ ದರ್ಶನ್ ಅವರಿಗೆ ಒದಗಿಸಿಲ್ಲ. ಇದು ನ್ಯಾಯಾಂಗ ಪ್ರಕ್ರಿಯೆ ಲೋಪವಾಗಿದೆ. ಅಲ್ಲದೆ, ಸಹ ಆರೋಪಿಗೆ ದಾರಿ ತಪ್ಪಿಸಿದ್ದಾರೆ. ಮಾಫಿ ಸಾಕ್ಷಿಯಾದರೆ ಶಿಕ್ಷೆಯಾಗುವುದಿಲ್ಲ ಎಂದು ತಿಳಿಸಿರುವುದು ಈ ಹೇಳಿಕೆ ನೀಡಲು ಕಾರಣವಾಗಿದೆ ಎಂದು ವಿವರಿಸಿದರು. ಅರ್ಜಿದಾರರ ಪರ ವಕೀಲರ ವಾದ ತಿರಸ್ಕರಿಸಿದ ಪೀಠ, ಅರ್ಜಿಯನ್ನು ವಜಾಗೊಳಿಸಿದೆ


Share It

You cannot copy content of this page