ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್, 59ನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ಎರಡನೇ ದಿನ ಹಾಜರಾಗಿ ಇನ್ ಕ್ಯಾಮರಾ ಮೂಲಕ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಿಕೊಳ್ಳಲಾಯಿತು.
ನಗರದ ಕೇಂದ್ರ ಕಾರಾಗೃಹದಲ್ಲಿರುವ ಪ್ರದೋಷ್ನನ್ನು ಮಂಗಳವಾರ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಹಾಗೂ ಹಲಸೂರು ಗೇಟ್ ಪೊಲೀಸರು ಬಿಗಿಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸುವ ವೇಳೆ ಪ್ರಮಾಣವಚನ ಬೋಧಿಸಲಾಯಿತು. ಈ ವೇಳೆ ಜೈಲಿನಲ್ಲಿರುವ ದರ್ಶನ್, ಪವಿತ್ರಾಗೌಡ ಸೇರಿ ಇನ್ನಿತರ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದರೆ, ಇನ್ನುಳಿದ ಆರೋಪಿಗಳು ಖುದ್ದು ನ್ಯಾಯಾಲಯದ ಮುಂದೆ ಹಾಜರಾಗಿದ್ದರು.
ಒಟ್ಟು ಮೂರು ಗಂಟೆಗಳ ಕಾಲ ಪ್ರದೋಷ್ನಿಂದ ಹೇಳಿಕೆ ದಾಖಲಿಸಿಕೊಂಡ ಕೋರ್ಟ್ ವಿಚಾರಣೆ ನಾಳೆಗೆ ಮುಂದೂಡಿತು. ಕೊಲೆ ಆರೋಪಿ ದರ್ಶನ್ನೊಂದಿಗೆ ನಂಟು, ಪವಿತ್ರಾಗೌಡ ಸಹಾಯಕ ಪವನ್ ಪಾತ್ರ, ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲೀಕ ವಿನಯ್ ಪಾತ್ರದ ಬಗ್ಗೆ ನಿನ್ನೆ ಹೇಳಿಕೆ ನೀಡಿದ್ದ ಪ್ರದೋಷ್, ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಾರಿನಲ್ಲಿ ಕರೆತಂದಿದ್ದ ಆರೋಪಿಗಳು ಸೇರಿ ಇನ್ನುಳಿದವರ ಪಾತ್ರದ ಬಗ್ಗೆ ಮಂಗಳವಾರ ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ಬೇರೆ ಪ್ರಕರಣ ವಿಚಾರಣೆ ಹಿನ್ನೆಲೆ ಕೆಲ ಹೊತ್ತಿನ ಬಳಿಕ ಜಡ್ಜ್ ವಿಚಾರಣೆ ಕೈಗೆತ್ತಿಕೊಳ್ಳುತ್ತಿದ್ದಂತೆ ಪ್ರದೋಷ್ ತಮ್ಮ ವಕೀಲರ ಜೊತೆ ಮಾತನಾಡಿರುವುದನ್ನ ಗಮನಿಸಿದ್ದ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಆಕ್ಷೇಪಿಸಿದರು. ಪ್ರದೋಷ್ ಮಾಫಿ ಸಾಕ್ಷಿಯಾಗಿದ್ದು, ಈ ವೇಳೆ ವಕೀಲರ ಜೊತೆ ಮಾತನಾಡಲು ಅವಕಾಶವಿಲ್ಲ, ಆರೋಪಿಯಾಗಿದ್ದರೆ ಮಾತನಾಡಬಹುದು. ವಕೀಲರ ಜೊತೆ ಮಾತನಾಡಲು ಅವಕಾಶ ಮಾಡಿಕೊಡಬಾರದು ಎಂದರು.
ಇದೇ ವೇಳೆ ನಿನ್ನೆ ನಡೆದ ಕಲಾಪವನ್ನು ಕೆಲವರು ಸ್ಕ್ರೀನ್ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾನದಲ್ಲಿ ಪೋಸ್ಟ್ ಮಾಡಿದ್ಧಾರೆ. ಈ ಬಗ್ಗೆ ದರ್ಶನ್ ಸೇರಿ ಬೇರೆ ಆರೋಪಿಗಳ ಪರ ವಕೀಲರು ಕೋರ್ಟ್ಗೆ ಮಾಹಿತಿ ನೀಡಿದರು. ಕೂಡಲೇ ಸೋಷಿಯಲ್ ಮೀಡಿಯಾದಲ್ಲಿ ಕೋರ್ಟ್ ಕಲಾಪದ ಸ್ಕ್ರೀನ್ ರೆಕಾರ್ಡ್ ವಿಡಿಯೋಗಳನ್ನು ಶೇರ್ ಮಾಡುವಂತಿಲ್ಲ ಎಂದು ಕೋರ್ಟ್ ಆದೇಶಿಸಿದೆ.
