ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಹಾಗೂ ₹18,748.23 ಕೋಟಿ ಅಂದಾಜು ಬೆಳೆ ಹಾನಿ ಉಲ್ಲೇಖಿಸಿ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದು ಕರ್ನಾಟಕಕ್ಕೆ ಕೇಂದ್ರದ ನೆರವು ಕೋರಿದ್ದಾರೆ.
ಸೆಪ್ಟಂಬರ್ 9ರ ವೇಳೆಗೆ ಕರ್ನಾಟಕದಲ್ಲಿ ಶೇ.34ರಷ್ಟು ಮಳೆ ಕೊರತೆ ಉಂಟಾಗಿದ್ದು, ರಾಜ್ಯದ 31 ಜಿಲ್ಲೆಗಳ ಪೈಕಿ 30 ಜಿಲ್ಲೆಗಳು ಹಾಗೂ 240 ತಾಲೂಕುಗಳ ಪೈಕಿ 182 ತಾಲೂಕುಗಳು ಮಳೆ ಕೊರತೆ ಎದುರಿಸುತ್ತಿವೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಸೆ. 24 ರಂದು ಬರೆದ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಕರ್ನಾಟಕ ಸರ್ಕಾರದ ಅಂದಾಜು ವರದಿ ಉಲ್ಲೇಖಿಸಿರುವ ಕೇಂದ್ರ ಸಚಿವ ಕುಮಾರಸ್ವಾಮಿ, 89 ತಾಲೂಕುಗಳು ತೀವ್ರವಾಗಿ ಬಾಧಿತವಾಗಿರುವುದನ್ನು ಒಳಗೊಂಡಂತೆ ಒಟ್ಟು 101 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ ಎಂದೂ ತಿಳಿಸಿದ್ದಾರೆ.
ಬರಗಾಲದಿಂದ ಕೃಷಿಗೆ ಅಪಾರ ಹಾನಿಯಾಗಿದ್ದು, 19.52 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಬೆಳೆ ಹಾನಿ ಮೌಲ್ಯ ₹18,748.23 ಕೋಟಿ ಎಂದು ಅಂದಾಜಿಸಲಾಗಿದೆ. ರಾಜ್ಯ ವಿಪತ್ತು ಸ್ಪಂದನಾ ನಿಧಿ (SDRF) ಮತ್ತು ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ (NDRF) ಮಾನದಂಡಗಳ ಅಡಿಯಲ್ಲಿ ಕರ್ನಾಟಕ ಸರ್ಕಾರ ₹3,705.30 ಕೋಟಿ ನೆರವು ಕೋರಿದೆ. ಪರಿಸ್ಥಿತಿ ಗಂಭೀರತೆ ಮತ್ತು ಬಾಧಿತ ಪ್ರದೇಶಗಳ ರೈತರು ಎದುರಿಸುತ್ತಿರುವ ತೊಂದರೆ ದೃಷ್ಟಿಯಲ್ಲಿಟ್ಟುಕೊಂಡು, ಶೀಘ್ರದಲ್ಲೇ ಅಂತರ-ಸಚಿವಾಲಯದ ಕೇಂದ್ರ ತಂಡವೊಂದನ್ನು (IMCT) ಕರ್ನಾಟಕಕ್ಕೆ ನಿಯೋಜಿಸುವಂತೆ ವಿನಂತಿಸಿದ್ದಾರೆ.
ಸೆಪ್ಟೆಂಬರ್ 29ರಂದು ನೀಡಿದ ತಮ್ಮ ಪ್ರತಿಕ್ರಿಯೆಯಲ್ಲಿ, ಕೇಂದ್ರದ ಸಮೀಕ್ಷೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಕುಮಾರಸ್ವಾಮಿ ಅವರಿಗೆ ತಿಳಿಸಿದ್ದಾರೆ. ಕರ್ನಾಟಕ ಸರ್ಕಾರವು ಎನ್‌ಡಿಆರ್‌ಎಫ್‌ನಿಂದ ಹಣಕಾಸಿನ ನೆರವು ಕೋರಿ ಮನವಿ ಸಲ್ಲಿಸಿದ್ದು, ಮನವಿ ಸ್ವೀಕರಿಸಿದ ಕೂಡಲೇ ಸೆಪ್ಟೆಂಬರ್ 17ರಂದೇ ಅಂತರ-ಸಚಿವಾಲಯದ ಕೇಂದ್ರ ತಂಡವನ್ನು ರಚಿಸಲಾಗಿದೆ ಎಂದು ಚೌಹಾಣ್ ತಿಳಿಸಿದ್ದಾರೆ.
ಬರಪೀಡಿತ ಪ್ರದೇಶಗಳ ಸ್ಥಳದಲ್ಲೇ ಪರಿಶೀಲನೆ ನಡೆಸಲು ಈ ತಂಡವು ಅಕ್ಟೋಬರ್ 3ರಿಂದ ಅಕ್ಟೋಬರ್ 7ರವರೆಗೆ ಕರ್ನಾಟಕಕ್ಕೆ ಭೇಟಿ ನೀಡಲು ನಿಗದಿಯಾಗಿದೆ. ಬರಪೀಡಿತ ಪ್ರದೇಶಗಳ ಸ್ಥಳದಲ್ಲೇ ಮೌಲ್ಯಮಾಪನ ನಡೆಸಿ, ಚಾಲ್ತಿಯಲ್ಲಿರುವ ಮಾನದಂಡಗಳು ಮತ್ತು ಮಾರ್ಗಸೂಚಿಗಳ ಪ್ರಕಾರ ವರದಿ ಸಲ್ಲಿಸಲು ಐಎಂಸಿಟಿ (IMCT) ತಂಡವು 03-10-2026 ರಿಂದ 07-10-2026ರವರೆಗೆ ರಾಜ್ಯಕ್ಕೆ ಭೇಟಿ ನೀಡುತ್ತಿದೆ ಎಂದು ಚೌಹಾಣ್ ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.
ಐದು ದಿನಗಳ ಈ ಸಮೀಕ್ಷೆಯ ನಂತರ, ಎನ್‌ಡಿಆರ್‌ಎಫ್ ನೆರವು ಬಿಡುಗಡೆಗೆ ಇರುವ ನಿಗದಿತ ಕಾರ್ಯವಿಧಾನದ ಮೂಲಕ ತಂಡದ ವರದಿಯನ್ನು ಪರಿಗಣಿಸಲಾಗುತ್ತದೆ. ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳ ನೇತೃತ್ವದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಉಪ ಸಮಿತಿಯು (SC-NEC) ಐಎಂಸಿಟಿ ಸಲ್ಲಿಸಿದ ವರದಿಯನ್ನು ಪರಿಶೀಲಿಸಲಿದೆ. ಕೇಂದ್ರ ಗೃಹ ಸಚಿವರ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಎನ್‌ಡಿಆರ್‌ಎಫ್ ನೆರಪಿನ ಮೊತ್ತವನ್ನು ಅನುಮೋದಿಸಲಿದೆ ಎಂದು ತಿಳಿಸಿದ ಚೌಹಾಣ್, ತಾವೂ ಸಹ ಆ ಸಮಿತಿಯ ಸದಸ್ಯರಾಗಿರುವುದಾಗಿ ಹೇಳಿದ್ದಾರೆ.
ಹಾನಿಯ ಪ್ರಮಾಣ ಮತ್ತು ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ಪರಿಗಣಿಸಿ, ವಿಪತ್ತು ಪರಿಹಾರದ ಅನ್ವಯಿಕ ಮಾನದಂಡಗಳ ಅಡಿಯಲ್ಲಿ ಹೆಚ್ಚಿನ ನೆರವು ಪರಿಗಣಿಸುವ ಸಲುವಾಗಿ ಕೇಂದ್ರ ತಂಡದ ಸಮೀಕ್ಷೆಯು ಅತ್ಯಗತ್ಯ ಎಂದು ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಕರ್ನಾಟಕ ಸರ್ಕಾರದ ಪ್ರಯತ್ನಗಳಿಗೆ ಕೇಂದ್ರ ಸರ್ಕಾರವು ಎಲ್ಲಾ ರೀತಿಯ ಬೆಂಬಲವನ್ನು ಮುಂದುವರಿಸಲಿದೆ ಎಂದು ಚೌಹಾಣ್ ಅವರು ಕುಮಾರಸ್ವಾಮಿ ಅವರಿಗೆ ಭರವಸೆ ನೀಡಿದ್ದಾರೆ.
“ರಾಜ್ಯ ಸರ್ಕಾರದ ಪ್ರಯತ್ನಗಳಲ್ಲಿ ಭಾರತ ಸರ್ಕಾರವು ಎಲ್ಲಾ ರೀತಿಯ ಬೆಂಬಲ ಮುಂದುವರಿಸಲಿದೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ” ಎಂದು ಚೌಹಾಣ್ ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ ಎಂದಿದ್ದಾರೆ.
