ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೂ ಬಹಳ ದೂರವಿದೆ. ಆದರೆ, ಈಗಲೇ ಕಾಂಗ್ರೆಸ್‌ನಲ್ಲಿ ಪವರ್ ಪಾಲಿಟಿಕ್ಸ್ ಆರಂಭವಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಗಳಿಸುವ ಯಶಸ್ಸಿನ ಮೇಲೆ ಮುಂದೆ ಅಧಿಕಾರ ಅನುಭವಿಸುವವರು ಯಾರು ಎಂಬ ಬಗ್ಗೆಯೇ ಎಲ್ಲ ಕಡೆ ಚರ್ಚೆಯಾಗಿದೆ. ನಾನು ಸಿಎಂ ಆಗಿ ಮುಂದುವರಿಯಬೇಕು ಎಂದರೆ, ನನ್ನ ಕೈ ಬಲಪಡಿಸಿ ಎಂದು ಸಿದ್ದರಾಮಯ್ಯ ಅನೇಕ ಪಡೆ ಪ್ರಚಾರ ಸಭೆಗಳಲ್ಲಿ ಬಹಿರಂಗವಾಗಿ ಹೇಳಿದ್ದರೆ, ಡಿ.ಕೆ.ಶಿವಕುಮಾರ್ ಹಳೇ ಮೈಸೂರು ಭಾಗದಲ್ಲಿ ತಮ್ಮನ್ನು ಸಿಎಂ ಆಗಿಸಲು ಪಕ್ಷವನ್ನು ಬೆಂಬಲಿಸಿ ಎಂದು ಪರೋಕ್ಷವಾಗಿ ಕೇಳಿಕೊಂಡಿದ್ದರು.
ಇದೀಗ ಲೋಕಸಭೆ ಚುನಾವಣೆಯ ಫಲಿತಾಂಶಕ್ಕೆ ಎರಡು ವಾರವಿರುವ ಮೊದಲೇ ಡಿಕೆಶಿ, ನನ್ನ ನೇತೃತ್ವದಲ್ಲಿ ಹಿಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇವೆ. ಈಗಲೂ ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಅತಿ ಹೆಚ್ಚು ಸ್ಥಾನಗಳನ್ನು ಕೊಡಿಸುತ್ತೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಗೆಲುವಿನಲ್ಲಿ ನನ್ನ ಪಾತ್ರ ಬಹಳ ಮುಖ್ಯವಾದುದು ಎಂಬುದನ್ನು ಪರೋಕ್ಷವಾಗಿ ಸಾರಿದ್ದಾರೆ. ಆ ಮೂಲಕ ತಾವು ಅಧಿಕಾರದ ಆಕಾಂಕ್ಷಿ ಎಂಬುದನ್ನು ಮಂಡನೆ ಮಾಡಿದ್ದಾರೆ.
ಪ್ರಕರಣದಲ್ಲಿ ಡಿಕೆಶಿಗೆ ಅದೆಷ್ಟು ಡ್ಯಾಮೇಜ್ ಆಗುತ್ತೋ ಏನೋ, ಆದರೆ, ಒಕ್ಕಲಿಗ ಸಮುದಾಯದ ಪ್ರಬಲ ರಾಜಕೀಯ ಎದುರಾಳಿಯನ್ನು ಕುಗ್ಗಿಸಿರುವುದಂತೂ ನಿಜ. ಪ್ರಸ್ತುತ ಚುನಾವಣೆ ಭವಿಷ್ಯದ ಮೇಲೆಯೇ ಒಕ್ಕಲಿಗ ಸಮುದಾಯದ ನಾಯಕತ್ವ ಯಾರದ್ದು ಎಂಬುದು ನಿರ್ಧಾರವಾಗುತ್ತದೆ. ಆ ಸಮುದಾಯ ಡಿಕೆಶಿ ಕಡೆಗೇನಾದರೂ ಒಲವು ತೋರಿಸಿದರೆ, ಡಿಕೆಶಿ ಸಿಎಂ ಕಾರ್ಡ್ ಪ್ಲೇ ಮಾಡುವುದು ಶತಸಿದ್ಧ. ಅದರ ಝಲಕ್‌ವೊಂದನ್ನಷ್ಟೇ ಈಗ ಬಿಟ್ಟಿದ್ದು, ಮುಂದೆ ಮತ್ತಷ್ಟು ದೊಡ್ಡ ದೊಡ್ಡ ಡ್ರಾಮಗಳನ್ನು ನಿರೀಕ್ಷೆ ಮಾಡಬಹುದು ಎನ್ನಲಾಗುತ್ತಿದೆ.