ಹಾಸನ: ರಜೆಗೆ ಊರಿಗೆ ಬಂದಿದ್ದ ಮಕ್ಕಳು ಕೆರೆಯಲ್ಲಿ ಈಜಾಡಲು ಹೋಗಿ ನೀರುಪಾಲಾಗಿರುವ ಘಟನೆ ಆಲೂರು ತಾಲೂಕಿನ ಕದಾಳು ಸಮೀಪದ ಮುತ್ತಿಗೆ ಗ್ರಾಮದಲ್ಲಿ ನಡೆದಿದ
ಮುತ್ತಿಗೆ ಗ್ರಾಮದ ಬಾಲಕರಾದ ಜೀವನ್(೧೩), ಸಾತ್ವಿಕ್(೧೧), ವಿಶ್ವ ಹಾಗೂ ಪೃಥ್ವಿ (೧೨) ಮೃತರು. ಇನ್ನೊಬ್ಬ ಬಾಲಕ ಚಿರಾಗ್ (೧೦) ಬದುಕುಳಿದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ್ದ ಶಾಸಕ ಸಿಮೆಂಟ್ ಮಂಜು ಅವರು ಮಕ್ಕಳ ಶವ ಹೊರತೆಗೆಯುವ ಕಾರ್ಯಾಚರಣೆ ಚುರುಕಾಗಿ ನಡೆಸುವಂತೆ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಸೂಚಿಸಿದರು. ಈ ವೇಳೆ ಮೃತರ ಕುಟುಂಬ ಸದಸ್ಯರಿಗೆ ಶಾಸಕರು ಸಾಂತ್ವನ ಹೇಳಿದರು.
ಶಾಲೆಗೆ ರಜೆ ಇದ್ದ ಕಾರಣದಿಂದ ಕೆರೆಗೆ ಮಕ್ಕಳು ಈಜಲು ಹೋಗಿದ್ದರು. ಈ ವೇಳೆ ಮೀನು ಹಿಡಿಯುವ ಮೋಜಿಗೆ ಬಿದ್ದು, ಕೆರೆಯಲ್ಲಿ ಮೀನು ಹಿಡಿಯುವುದಕ್ಕೆ ಆಳದ ನೀರಿಗೆ ಇಳಿದಿದ್ದಾರೆ. ಆಗ ಮಕ್ಕಳು ಒಬ್ಬರನ್ನೊಬ್ಬರು ರಕ್ಷಿಸಲು ಹೋಗಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ನೀರಲ್ಲಿ ಮುಳುಗಿದ ಬಾಲಕರಿಗಾಗಿ ಹುಡುಕಾಟ ಆರಂಭಿಸಿದೆ. ಇಬ್ಬರ ಬಾಲಕರ ಮೃತದೇಹ ಹೊರತೆಗೆದಿದ್ದಾರೆ. ಮತ್ತಿಬ್ಬರು ಮಕ್ಕಳ ಶವದ ಹುಡುಕಾಟ ನಡೆದಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.