ಅಪರಾಧ ರಾಜಕೀಯ ಸುದ್ದಿ

ಎಸ್ಐಟಿ ದಾಳಿ: ಪ್ರೀತಂಗೌಡ ಆಪ್ತರ ಮನೆಗಳಲ್ಲಿ 10 ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ಪತ್ತೆ

Share It

ಹಾಸನ, ಮೇ 16: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿರುವ ಎಸ್ಐಟಿ ತನಿಖಾ ತಂಡಕ್ಕೆ ಬಿಜೆಪಿ ನಾಯಕ ಪ್ರೀತಂ ಗೌಡ ಆಪ್ತರ ಮನೆಯಲ್ಲಿ 10 ಪೆನ್​​ಡ್ರೈವ್‌ಗಳು, ಹಾರ್ಡ್ ಡಿಸ್ಕ್ ಅನ್ನು ವಶಕ್ಕೆ ಪಡೆದಿದೆ.

ಮಾಜಿ ಶಾಸಕ ಪ್ರೀತಂಗೌಡ ಆಪ್ತರು ಮತ್ತು ಪ್ರಕರಣದ ಸಂಬಂಧ ಈಗಾಗಲೇ ಬಂಧನಕ್ಕೊಳಗಾಗಿರುವವರ ಮನೆಗಳ ಮೇಲೆ ನಿನ್ನೆ ಎಸ್​ಐಟಿ ದಾಳಿ ನಡೆಸಿತ್ತು. ಈಗ ವಶಕ್ಕೆ ಪಡೆದಿರುವ ಪೆನ್​ಡ್ರೈವ್​ಗಳನ್ನು ಎಸ್​ಐಟಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಿದೆ.

ಪ್ರೀತಂಗೌಡ ಆಪ್ತರ ಮನೆಯಲ್ಲಿ ದೊರೆತ ಪೆನ್​​ಡ್ರೈವ್ ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದ್ದೇ ಹೌದೋ? ಅಲ್ಲವೋ? ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕವಷ್ಟೇ ತಿಳಿದುಬರಲಿದೆ. ಇನ್ನು ಹಾಸನದ 18 ಕಡೆ ನಡೆಸಿದ ದಾಳಿಯಲ್ಲಿ ಎಸ್​ಐಟಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. 7 ಪೆನ್ ಡ್ರೈವ್, 6 ಹಾರ್ಡ್ ಡಿಸ್ಕ್, 4 ಲ್ಯಾಪ್ ಟಾಪ್, 3 ಡೆಸ್ಕ್ ಟಾಪ್ ವಶಕ್ಕೆ ಪಡೆದಿದೆ.

ದಾಳಿ ನಡೆಸಿದ ಕಡೆಯಲ್ಲಿ ಸಿಕ್ಕ ಸಿಸಿ ಕ್ಯಾಮರಾಗಳ ದೃಶ್ಯಗಳನ್ನೂ ಪರಿಶೀಲನೆ ನಡೆಸಲಾಗುತ್ತಿದೆ. ಪತ್ತೆಯಾದ ಹಾರ್ಡ್ ಡಿಸ್ಕ್​​ಗಳಲ್ಲಿರುವ ವಿಡಿಯೋಗಳನ್ನೂ ಪರಿಶೀಲನೆ ಮಾಡಲಾಗುತ್ತಿದೆ. ವಿಡಿಯೋಗಳನ್ನು ಪೆನ್ ಡ್ರೈವ್, ಲ್ಯಾಪ್ ಟಾಪ್ ಹಾಗೂ ಡೆಸ್ಕ್ ಟಾಪ್​​ಗೆ ಕಾಪಿ ಮಾಡಿ ನಂತರ ಬೇರೆಯವರಿಗೆ ಹಂಚಿರುವ ಆರೋಪವಿದೆ.

ವಿಡಿಯೋ ಉಳ್ಳ ಪೆನ್ ಡ್ರೈವ್ ಹಂಚಿಕೆಯ ಆರೋಪ ಎದುರಿಸುತ್ತಿರುವವರ ಮನೆ, ಕಚೇರಿಗೆ ಬಂದು ಹೋಗಿರುವವರ ಬಗ್ಗೆಯೂ ಎಸ್​​ಐಟಿ ಮಾಹಿತಿ ಕಲೆ ಹಾಕುತ್ತಿದೆ.

ಕಾಂಗ್ರೆಸ್ ಕಾರ್ಯಕರ್ತರ ಬಂಧನವಿಲ್ಲ!
ಅಚ್ಚರಿ ಎಂಬಂತೆ ಎಸ್​​ಐಟಿ ಹಾಸನದ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾದ 33/2024 ಪ್ರಕರಣಕ್ಕೆ ಹೊಸ ಹೆಸರು ಸೇರಿಸಿ ಇಬ್ಬರನ್ನು ಬಂಧಿಸಿದೆ. ಈ ಪೆನ್ ಡ್ರೈವ್ ಕೇಸಿನಲ್ಲಿ ಎ-6 ಮತ್ತು ಎ-7 ನೇ ಆರೋಪಿಗಳಾಗಿರುವ ಚೇತನ್ ಹಾಗು ಲಿಖಿತ್ ಗೌಡ ಎಂಬುವರನ್ನು ಬಂಧಿಸಲಾಗಿದೆ. ಇವರಿಬ್ಬರೂ ಹಾಸನ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಅವರ ಆಪ್ತರಾಗಿದ್ದಾರೆ.

ಇವರಿಬ್ಬರ ಬಂಧನವಾದರೂ ಮೊದಲ ಐವರು ಆರೋಪಿಗಳ ಬಂಧನ ಇನ್ನೂ ಆಗಿಲ್ಲ. ಕಾಂಗ್ರೆಸ್ ಕಾರ್ಯಕರ್ತರಾದ ನವೀನ್ ಗೌಡ, ಚೇತನ್ ಹಾಗೂ ಪುಟ್ಟಿ ಆಲಿಯಾಸ್ ಪುಟ್ಟರಾಜ್​​ರನ್ನು ಈವರೆಗೂ ಎಸ್​ಐಟಿ ಬಂಧಿಸಿಲ್ಲ. ಪೆನ್ ಡ್ರೈವ್ ಹೊಂದಿದ್ದ ಮೂಲ ವ್ಯಕ್ತಿ, ಪ್ರಜ್ವಲ್ ಮಾಜಿ ಕಾರು ಚಾಲಕನನ್ನೂ ಎಸ್ಐಟಿ ತನಿಖಾ ತಂಡ ವಶಕ್ಕೆ ಪಡೆದಿಲ್ಲ.


Share It

You cannot copy content of this page