ಕೊತ್ತನೂರು ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡುವಂತೆ ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಸೂಚನೆ
ಬೆಂಗಳೂರು: ನಕಲಿ ದಾಖಲೆ ಸಲ್ಲಿಸಿ ಜಾಮಿಯಾ ಮಹಮ್ಮದೀಯ ಮನ್ಸೂರ ಸಂಸ್ಥೆಯ ಜಾಮಿಯಾ ಮಹಮ್ಮದಿಯ ಎಜುಕೇಷನ್ ಸೊಸೈಟಿ, ಮುಂಬೈ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಈ ವರ್ಷ ಜನವರಿ 27 ರಂದು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಲು ವಿಳಂಬ ಮಾಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಹೈಕೋರ್ಟ್, ಕೊತ್ತನೂರು ಪೊಲೀಸರಿಗೆ ಬೆಂಗಳೂರು ನಗರ ಪೊಲೀಸ್ ಅಯುಕ್ತರು ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ರಾಜ್ಯ ಹೈಕೋರ್ಟ್ ಮೌಖಿಕವಾಗಿ ಆದೇಶಿಸಿದೆ.
ಅಬ್ದುಲ್ ಹಮೀದ್ ಪಾಷಾ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ತಾರಾ ವಿತಸ್ತ ಗಂಜು ನೇತೃತ್ವದ ನ್ಯಾಯಪೀಠ ಈ ಸೂಚನೆ ನೀಡಿದೆ. ತನಿಖೆಯು ಅತಿಯಾಗಿ ದೀರ್ಘ ಸಮಯ ತೆಗೆದುಕೊಳ್ಳುತ್ತಿರುವುದರಿಂದ, ಅನಗತ್ಯ ವಿಳಂಬ ತಪ್ಪಿಸಲು ಬೆಂಗಳೂರು ಪೊಲೀಸ್ ಆಯುಕ್ತರು ಕೊತ್ತನೂರು ಪೊಲೀಸರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು. ಸಾಧ್ಯವಾದಷ್ಟು ಬೇಗ ವರದಿ ಸಲ್ಲಿಸಬೇಕು. ಹೆಚ್ಚುವರಿ ಸರ್ಕಾರಿ ವಕೀಲರು ಈ ಆದೇಶವನ್ನು ಯಾವುದೇ ವಿಳಂಬವಿಲ್ಲದೇ ಪೊಲೀಸ್ ಆಯುಕ್ತರ ಗಮನಕ್ಕೆ ತರಬೇಕು ಎಂದು ಹೇಳಿದೆ.
ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಸಿ.ಎನ್. ಗೋವಿಂದಪ್ಪ ಅವರು ಸದರಿ ಶಿಕ್ಷಣ ಸಂಸ್ಥೆ ವಿರುದ್ಧ ಬಿ.ಎನ್.ಎಸ್. 318[4], 336, 340 ರ ಅಡಿ ಕ್ರಮ ಜರುಗಿಸುವಂತೆ ಜನವರಿಯಲ್ಲಿ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ದೂರು ದಾಖಲಿಸಿದ್ದರು. ತನಿಖೆಯಲ್ಲಿ ಆಗಿರುವ ಪ್ರಗತಿಯ ಕುರಿತು ಸಂಬಂಧಪಟ್ಟ ತನಿಖಾಧಿಕಾರಿ ಪಡೆದಿರುವ ವರದಿ ಪ್ರಕಾರ, ತನಿಖೆ ನಡೆಯುತ್ತಿದೆ ಮತ್ತು ಇನ್ನೂ ಅಂತಿಮ ವರದಿಯನ್ನು ಸಲ್ಲಿಸಬೇಕಾಗಿದೆ. ಕ್ರಿಮಿನಲ್ ದೂರಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಆರೋಪಪಟ್ಟಿ ಸಲ್ಲಿಸಿಲ್ಲ. ಹೀಗಾಗಿ ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಿದಿದ್ದು, ತನಿಖೆಯ ಸ್ಥಿತಿಯನ್ನು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಜಾಮಿಯಾ ಮಹಮ್ಮದಿಯ ಎಜುಕೇಷನ್ ಸೊಸೈಟಿ, ಮುಂಬೈ ವಿರುದ್ಧ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಮನವಿಯನ್ನು ಪರಿಗಣಿಸುವುದು ನ್ಯಾಯಾಲಯದ ವಿವೇಚನೆಗೆ ಬಿಟ್ಟಿದ್ದು. ಪ್ರತಿವಾದಿಗಳು ಉದ್ದೇಶಪೂರ್ವಕವಾಗಿ ನ್ಯಾಯಾಲಯಕ್ಕೆ ಅವಿಧೇಯತೆ ತೋರಿದ್ದಾರೆ ಎಂದು ಆರೋಪಿಸಿ ಅರ್ಜಿದಾರರು ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸುತ್ತೇವೆ ಎಂದು ನ್ಯಾಯಪೀಠ ಹೇಳಿದೆ.
ನೋಂದಣಿಯಾಗದ ಮದರಸಾ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಪಡೆದಿರುವ ರೂ 5 ಲಕ್ಷ ರೂ ವಿಚಾರದಲ್ಲಿನ ವಂಚನೆಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಇಲಾಖೆಯು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತಿದೆ. ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಾದ ಯಾಸ್ಮಿನ್ ಬೇಗಂ ಜಿ. ವಾಲಿಕರ್ ಅವರು ಪ್ರಮಾಣಪತ್ರ ಸಲ್ಲಿಸಿದ್ದು, ನಕಲಿ ದಾಖಲೆಗಳನ್ನು ಸಲ್ಲಿಸಿ ನಿರ್ದೇಶನಾಲಯದಿಂದ 5 ಲಕ್ಷ ರೂ ಹಣ ಮಂಜೂರು ಮಾಡಿಸಿಕೊಂಡಿರುವ ಕುರಿತು ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿಯು ನಿರ್ದೇಶನಗಳನ್ನು ಪಾಲಿಸಲು ಮತ್ತು ಸರ್ಕಾರಕ್ಕೆ ಬಾಕಿ ಇರುವ ರೂ 5 ಲಕ್ಷ ಮೊತ್ತವನ್ನು ಬಡ್ಡಿ ಸಮೇತ ಪಾವತಿಸಲು ಸಮಯ ಕೋರಿತ್ತು. ಹೀಗಾಗಿ ಸಧ್ಯಕ್ಕೆ ಮಧ್ಯಂತರ ವರದಿ ಸಲ್ಲಿಸಲಾಗಿದೆ. ವಸೂಲಾತಿ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಅಲ್ಪಸಂಖ್ಯಾತರ ನಿರ್ದೇಶನಾಲಯ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ನ್ಯಾಯಪೀಠಕ್ಕೆ ಅವರು ತಿಳಿಸಿದ್ದಾರೆ.
