ಹುಬ್ಬಳ್ಳಿ: ಹುಬ್ಬಳ್ಳಿ ನಗರವನ್ನು ಮತ್ತೊಮ್ಮೆ ಬೆಚ್ಚಿಬೀಳಿಸಿರುವ ಯುವತಿ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದಲ್ಲಿ ಕರ್ತವ್ಯಲೋಪದ ಆರೋಪದಲ್ಲಿ ಬೆಂಡಗೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಚಂದ್ರಶೇಖರ್ ಮತ್ತು ಮಹಿಳಾ ಪಿಸಿ ರೇಖಾ ಅವರನ್ನು ಅಮಾನತು ಮಾಡಲಾಗಿದೆ.
ಈ ಕುರಿತು ಅಧಿಕೃತ ಪ್ರಕಟಣೆ ನೀಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರನ್ ತಿಳಿಸಿದ್ದಾರೆ. ಯುವತಿಯ ಕಟುಂಬ ಬೆಂಡಗೇರಿ ಪೊಲೀಸ್ ಠಾಣೆಗೆ ಈ ಹಿಂದೆಯೇ ಭೇಟಿ ನೀಡಿ, ತಮಗೆ ರಕ್ಷಣೆ ನೀಡುವಂತೆ ಕೇಳಿಕೊಂಡಿತ್ತು ಎನ್ನಲಾಗಿದೆ. ಆದರೆ, ಪೊಲೀಸರ ನಿರ್ಲಕ್ಷ್ಯದಿಂದ ಯುವತಿಯ ಪ್ರಾಣ ಹೋಗಿದೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಂಜಲಿ ಅಂಬಿಗೇರ ಎಂಬ ಯುವತಿ, ವಿಶ್ವ ಎಂಬ ಯುವಕನ ಜತೆಗೆ ಸಲುಗೆಯಿಂದ ಇದ್ದಳು. ಆತ ಆಗಾಗ, ಸಿಕ್ಕಸಿಕ್ಕಲ್ಲಿಗೆ ಕರೆಯುತ್ತಿದ್ದ. ಆದರೆ, ಯುವತಿ ನಿರಾಕರಿಸಿದ ಕಾರಣಕ್ಕೆ ಬುಧವಾರ ಬೆಳಗ್ಗೆ ಬಾಗಿಲು ತಟ್ಟಿ ಯುವತಿಯನ್ನು ಆಚೆ ಕರೆದು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ.
ಘಟನೆ ನಡೆಯುವ ನಾಲ್ಕೆöÊದು ದಿನ ಹಿಂದೆಯೇ ಯುವತಿಯ ಕುಟುಂಬ ಬೆಂಡಗೇರಿ ಪೊಲೀಸ್ ಠಾಣೆಗೆ ಭೇಟಿ ನೀಡಿತ್ತು. ಅದರ ಸಿಸಿಟಿವಿ ದೃಶ್ಯಾವಳಿಗಳು ಕೂಡ ಸಿಕ್ಕಿದ್ದವು. ಆದರೆ, ಯಾವುದೇ ದೂರು ದಾಖಲಾಗಿರಲಿಲ್ಲ. ಠಾಣೆಯ ಅಧಿಕಾರಿಗಳು, ಬೇರೆ ಯಾವುದೋ ಪ್ರಕರಣದಲ್ಲಿ ಅವರು ಬಂದಿರಬಹುದು ಎಂದು ಸಬೂಬು ಹೇಳಿದ್ದರು. ಇದರಲ್ಲಿ ಅಧಿಕಾರಿಗಳ ಕರ್ತವ್ಯ ಲೋಪ ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ಚಂದ್ರಶೇಖರ್ ಮತ್ತು ಮಹಿಳಾ ಪೊಲೀಸ್ ಫೇದೆ ರೇಖಾ ಅವರನ್ನು ಅಮಾನತು ಮಾಡಿ ಆದೇಶ ಮಾಡಲಾಗಿದೆ.