ರಾಜಕೀಯ ಸುದ್ದಿ

ಕಾಂಗ್ರೆಸ್ ಅಭ್ಯರ್ಥಿಗಳು ಸೋತರೆ ಸಿಎಂ ಸಿದ್ದರಾಮಯ್ಯ ಸ್ಥಾನಕ್ಕೆ ಕಂಟಕ: ಸಚಿವ ಬೈರತಿ ಸುರೇಶ್

Share It

ಕೋಲಾರ: ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಿಷ್ಯ, ಸಚಿವ ಬೈರತಿ ಸುರೇಶ್​ ಅವರು ಕಾಂಗ್ರೆಸ್​ ಅಭ್ಯರ್ಥಿಗಳು ಸೋತರೆ ಸಿಎಂ ಸ್ಥಾನಕ್ಕೆ ಕಂಟಕವಾಗಲಿದೆ ಎಂದು ಗುರುವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಇಂದು ಕೋಲಾರ ನಗರದ ಹಾಲಿಸ್ಟರ್ ಭವನದಲ್ಲಿ ನಡೆದ ಕುರುಬ ಸಮುದಾಯದ ಮುಖಂಡ ಸಭೆಯಲ್ಲಿ ಮಾತನಾಡಿದ ಸಚಿವ ಬೈರತಿ ಸುರೇಶ್ ಅವರು, ನಮ್ಮ ಅಭ್ಯರ್ಥಿಗಳು ಸೋತರೆ ಸಿದ್ದರಾಮಯ್ಯ ಅವರ ಸೀಟಿಗೆ ಕಂಟಕವಾಗುತ್ತದೆ. ನೀವು ಆ ಕೆಲಸ ಮಾಡಬೇಡಿ. ನಿಮಗೆ ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದರು.

ನೀವೆಲ್ಲರೂ ಸೇರಿ ಕುರುಬ ಸಮುದಾಯದ ಸಿದ್ದರಾಮಯ್ಯನವರ ಕೈ ಬಲಪಡಿಸಬೇಕು. ನಿಮ್ಮ ಬೆಂಬಲ ಕಾಂಗ್ರೆಸ್ ಪಕ್ಷದ ಮೇಲಿರಲಿ. ಸಿದ್ದರಾಮಯ್ಯ ನವರ ಮೇಲಿರಲಿ. ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೆವಿ ಗೌತಮ್​ ಮೇಲಿರಲಿ. ನೀವು ಬೇರೆ ಮನಸ್ಸು ಮಾಡಿ ಬೇರೆ ಅಭ್ಯರ್ಥಿ ಏನಾದರೂ ಗೆದ್ದರೆ ಸಿದ್ದರಾಮಯ್ಯನವರ ಸೀಟಿಗೆ ಕಂಟಕವಾಗಲಿದೆ. ಅವರ ಸೀಟಿಕೆ ಕಂಟಕವಾದರೆ ನೀವೇ ನೇರವಾಗಿ ಹೊಣೆಗಾರರಾಗುತ್ತೀರಿ ಎಂದು ಹೇಳಿದರು.

ಕುರುಬ ಸಮುದಾಯದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೈರತಿ ಸುರೇಶ್, ಕುರುಬ ಸಮುದಾಯ ಕೋಲಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದೆ. ಸಿದ್ದರಾಮಯ್ಯನವರ ಕೈ ಬಲಪಡಿಸಲು ಬೆಂಬಲ ನೀಡಿದ್ದಾರೆ. ಕೋಲಾರದಲ್ಲಿ ಎಸ್ಸಿ ಎಡಗೈ, ಬಲಗೈ ಸಮುದಾಯ ಒಂದಾಗಿದೆ. ಬಲಗೈ ಸಮುದಾಯದವರು ನಮಗೆ ಬೆಂಬಲ ಕೊಡ್ತಾರೆ ಎಂದರು.

ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಿನ್ನೆ ಡಿಕೆ ಶಿವಕುಮಾರ್ ಅವರನ್ನು ಸಿಎಂ ಎಂದು ಹೇಳಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್, ಅದು ಬಾಯಿ ತಪ್ಪಿ ಹೇಳಿದ್ದಾರೆ ಅಷ್ಟೇ. ಬಹಳಷ್ಟು ನಾಯಕರು ಬಾಯ್ತಪ್ಪಿ ಮಾತಾಡಿದ್ದಾರೆ. ದೇವೇಗೌಡರು – ಯಡಿಯೂರಪ್ಪ ಮಾತನಾಡಿರುವುದನ್ನು ಕೇಳಿಸಿಕೊಳ್ಳಲಾಗದೆ ಕಿವಿ ಮುಚ್ಚಿಕೊಳ್ಳಬೇಕಾಗುತ್ತದೆ ಎಂದರು.


Share It

You cannot copy content of this page