ಉಪಯುಕ್ತ ಸುದ್ದಿ

ಕನ್ನಡಿಗರ ಪರ ನಿಂತ ಕರ್ನಾಟಕ ಹೈಕೋರ್ಟ್

Share It

ಕನ್ನಡಿಗರಿಗೆ ಶೇ.೮೦ರಷ್ಟು ಉದ್ಯೋಗ ನೀಡುವಂತೆ ತಾಕೀತು
ಬೆಂಗಳೂರು: ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರವನ್ನು ಆಗಾಗ ಒತ್ತಾಯಿಸುತ್ತಲೇ ಇದ್ದು, ಇದೀಗ ಕನ್ನಡಿಗರ ಪರವಾದ ನಿರ್ಧಾರವೊಂದು ಹೈಕೋರ್ಟ್ನಲ್ಲಿ ಹೊರಬಿದ್ದಿದೆ.

ಕರ್ನಾಟಕದಲ್ಲಿ ಜಾಗ ಸೇರಿದಂತೆ ಅನೇಕ ಸೌಲಭ್ಯಗಳನ್ನು ಪಡೆದಿರುವ ಖಾಸಗಿ ಕಂಪನಿಗಳು ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ. ಅಧಿಕಾರಿಗಳ ಹುದ್ದೆಗಳಿಗೆ ಕನ್ನಡಿಗರನ್ನು ನೇಮಿಸುವುದಿಲ್ಲ. ಕೇವಲ ಸಿ ಹಾಗೂ ಡಿ ವೃಂದದ ಉದ್ಯೋಗಗಳನ್ನು ಕನ್ನಡಿಗರಿಗೆ ನೀಡಲಾಗುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಎಲ್ಲಾ ಹಂತದ ಹುದ್ದೆಗಳಲ್ಲೂ ಸಮಾನ ಅವಕಾಶ ನೀಡುವಂತಾಗಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.

ವಿವಿಧೋದ್ದೇಶ ಕೇಂದ್ರಗಳ ನಿರ್ಮಾಣಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಹಾರ್ಡ್ವೇರ್ ಪಾರ್ಕ್ನಲ್ಲಿ ನಾಲ್ಕೂವರೆ ಎಕರೆ ಜಮೀನು ಹಂಚಿಕೆ ಮಾಡಿದ್ದ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕನ್ನಡಿಗರಿಗೆ ಉದ್ಯೋಗ ನೀಡುವ ವಿಚಾರದಲ್ಲಿ ಕಂಪನಿಯ ನಿರ್ಧಾರವನ್ನು ಪ್ರಶ್ನಿಸಿ, ಜಮೀನು ವಾಪಸ್ ಪಡೆಯುವ ನಿರ್ಧಾರ ತೆಗೆದುಕೊಂಡಿತ್ತು.

ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಐಡಿಬಿಐ ಬ್ಯಾಂಕ್ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಕನ್ನಡಿಗರಿಗೆ ಉದ್ಯೋಗ ನೀಡಲು ಬ್ಯಾಂಕ್ ಹಿಂದೇಟು ಹಾಕಿರುವ ಅಂಶವನ್ನು ಗಮನಿಸಿದ ನ್ಯಾಯಪೀಠ, ಅತೃಪ್ತಿ ವ್ಯಕ್ತಪಡಿಸಿತು.

ಕನ್ನಡಿಗರ ನೆಲ-ಜಲ ಪಡೆದು ಅವರಿಗೆ ಉದ್ಯೋಗ ನೀಡದಿದ್ದರೆ ಹೇಗೆ? ಉದ್ಯೋಗ ನೀಡದಿದ್ದರೆ ಕನ್ನಡಿಗರ ಆತ್ಮಸಾಕ್ಷಿಗೆ ಚುಚ್ಚಿದಂತಾಗುತ್ತದೆ. ಜವಾನ-ಝಾಡಮಾಲಿ ಉದ್ಯೋಗಗಳಿಗೆ ಮಾತ್ರ ಕನ್ನಡಿಗರನ್ನು ನೇಮಕ ಮಾಡುವುದಲ್ಲ. ಎಲ್ಲಾ ಹಂತದ ಹುದ್ದೆಗಳಿಗೂ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು ಎಂದು ತಾಕೀತು ಮಾಡಿತು. ಸಂಸ್ಥೆಯಲ್ಲಿ ಕನ್ನಡಿಗರಿಗೆ ಶೇ.೮೦ರಷ್ಟು ಉದ್ಯೋಗ ನೀಡುವುದಾಗಿ ಪ್ರಮಾಣಪತ್ರ ಸಲ್ಲಿಸುವಂತೆಯೂ ಐಡಿಬಿಐ ಬ್ಯಾಂಕ್‌ಗೆ ಸೂಚಿಸಿದೆ.

ಕಾದಂಬರಿಕಾರ ಗಳಗನಾಥ ಅವರ ಮಾತುಗಳನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ಕನ್ನಡಿಗರಿಗೆ ಕನ್ನಡಿಗರಿಂದ ಆದಷ್ಟು ಅನ್ಯಾಯ ಬೇರೆಯವರಿಂದ ಆಗಿಲ್ಲ. ಇಂತಹ ಅನ್ಯಾಯ ಬೇರೆಲ್ಲೂ ಆಗಿಲ್ಲ. ಬ್ರಿಟಿಷ್ ಅಧಿಕಾರಿ ರಾಬರ್ಟ್ ಕ್ಲೈವ್ ಸ್ಥಳೀಯರನ್ನು ಗ್ರೂಪ್ ಸಿ ಹುದ್ದೆಗೆ ನೇಮಿಸುತ್ತಿದ್ದರು. ಅದೇ ರೀತಿ ನೀವೂ ಸಹ ವರ್ತಿಸಬಾರದೆಂದು ಬ್ಯಾಂಕ್ ಪರ ವಕೀಲರ ಕಿವಿ ಹಿಂಡಿತು. ಅಂತಿಮವಾಗಿ, ಪ್ರಕರಣದಲ್ಲಿ ಭೂಮಿ ಹಂಚಿಕೆ ಮಾಡಿ ನೀಡಲಾಗಿದ್ದ ಮಂಜೂರಾತಿ ಪತ್ರ ರದ್ದುಪಡಿಸಿರುವ ವಿಚಾರ ಸಂಬAಧ ಯಥಾಸ್ಥಿತಿ ಕಾಯ್ದಕೊಳ್ಳುವಂತೆ ಕೆಐಎಡಿಬಿ ಮತ್ತು ಐಡಿಬಿಐ ಬ್ಯಾಂಕಿಗೆ ಸೂಚಿಸಿತು.


Share It

You cannot copy content of this page