ಬೆಂಗಳೂರು: ಮತದಾನ ಹೆಚ್ಚಳಕ್ಕೆ ಆಯೋಗ ಅನೇಕ ಕಸರತ್ತು ನಡೆಸುತ್ತಿದ್ದು, ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರಕ್ಕೆ ಹೈಕೋರ್ಟ್ ಅಸ್ತು÷ಎಂದ
ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನವಾಗಬೇಕೆಂಬ ಸದುದ್ದೇಶದಿಂದ ಮತದಾನ ಮಾಡಿ ಬರುವ ಗ್ರಾಹಕರಿಗೆ ಉಚಿತ ಆಹಾರ ಒದಗಿಸುವ ನಿರ್ಧಾರವನ್ನು ಬೆಂಗಳೂರು ಹೋಟೆಲ್ ಸಂಘ ತೆಗೆದುಕೊಂಡಿತ್ತು. ಈ ನಿರ್ಧಾರದಿಂದ ರಾಜಕೀಯಪ್ರೇರಣೆಯಾಗುತ್ತದೆ ಎಂಬ ಕಾರಣಕ್ಕೆ ಬಿಬಿಎಂಪಿ ಆಕ್ಷೇಪಣೆ ವ್ಯಕ್ತಪಡಿಸಿತ್ತು.
ಇದನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲ್ ಸಂಘ ಮತ್ತು ನಿಸರ್ಗ ಗ್ರ‍್ಯಾಂಡ್ ಹೋಟೆಲ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಹೋಟೇಲ್ ಮಾಲೀಕರ ಸಂಘದ ನಿರ್ಧಾರಕ್ಕೆ ಅಸ್ತು ಎಂದಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ಸಂಘ ಯಾವುದೇ ರಾಜಕೀಯ ದುರುದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿಲ್ಲ. ಮತದಾನದ ಉತ್ತೇಜನಕ್ಕೆ ನಾವು ಈ ಕಾರ್ಯ ಕೈಗೊಂಡಿದ್ದು, ಈ ಹಿಂದೆಯೂ ಮತದಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಉಚಿತ ಆಹಾರ ವಿತರಣೆ ಮಾಡಿದ್ದೇವೆ.
ಹಾಗಾಗಿ ನಮ್ಮ ನಿರ್ಧಾರಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು. ಕೆಲಕಾಲ ವಾದ ಆಲಿಸಿದ ನ್ಯಾಯಪೀಠ ಅರ್ಜಿದಾರರ ಉತ್ತಮ ನಡೆಗೆ ಪ್ರಶಂಸೆ ವ್ಯಕ್ತಪಡಿಸಿತು. ಚುನಾವಣೆ ದಿನ ಮತದಾನ ಮಾಡಿ ಬಂದ ಗ್ರಾಹಕರಿಗೆ ಉಚಿತವಾಗಿ ಆಹಾರ ನೀಡಲು ಅವಕಾಶ ಕಲ್ಪಿಸಿತು.