ಚನ್ನರಾಯಪಟ್ಟಣ: ಕೆಎಸ್‌ಆರ್‌ಟಿಸಿ ಬಸ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಸವಾರರಿಬ್ಬರು ಮೃತಪಟ್ಟಿದ್ದು, ಡಿವೈಡೆರ್‌ಗೆ ಗುದ್ದಿದ ರಭಸಕ್ಕೆ ಬಸ್ ಹೊತ್ತಿ ಉರಿದಿರುವ ಘಟನೆ ಮಂಗಳವಾರ ಚನ್ನರಾಯಪಟ್ಟಣ ತಾಲೂಕಿನ ಬೇಡಿಗನಹಳ್ಳಿ ಗೇಟ್ ಬಳಿ ನಡೆದಿದೆ.
ಬೈಕ್ ಸವಾರರಾದ ತಿಪಟೂರು ತಾಲೂಕಿನ ಬಿದರೆಕೆರೆ ಗ್ರಾಮದ ರೇಣುಕಪ್ಪ (೪೨) ಮತ್ತು ಇದೇ ಗ್ರಾಮದ ರವೀಶ (೨೫) ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಘಟಕದ ಕೆಎಸ್‌ಆರ್‌ಟಿಸಿ ಬಸ್ ಬೆಂಗಳೂರು ಕಡೆಯಿಂದ ಬರುತ್ತಿದ್ದು, ಬೇಡಿಗನಹಳ್ಳಿ ಗೇಟ್ ಬಳಿ ಮುಂದಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಬೈಕ್‌ನಲ್ಲಿದ್ದ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್‌ನ ಭಾಗಗಳು ಬೇರೆ ಬೇರೆಯಾಗಿವೆ.
ಬಸ್ ಮತ್ತು ಬೈಕ್ ಡಿಕ್ಕಿ ಹೊಡೆದ ತಕ್ಷಣವೇ ಬಸ್‌ನ ಡೀಸೆಲ್ ಟ್ಯಾಂಕ್ ಸೋರಿಕೆಯಾಗಿದೆ. ಪರಿಣಾಮ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಬಸ್ ಚಾಲಕ ಪ್ರಯಾಣಿಕರನ್ನು ತುರ್ತಾಗಿ ಕೆಳಗೆ ಇಳಿಸಿ ಎಲ್ಲರ ಪ್ರಾಣ ಉಳಿಸಿದ್ದಾರೆ. ನೋಡ ನೋಡುತ್ತಲೇ ರಸ್ತೆ ಮಧ್ಯೆ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಸ್ಥಳಕ್ಕೆ ಚನ್ನರಾಯಪಟ್ಟಣ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಬಸ್‌ಗೆ ಹೊತ್ತಿದ್ದ ಬೆಂಕಿಯನ್ನು ನಂದಿಸುವ ಪ್ರಯತ್ನ ನಡೆಸಿದ್ದಾರೆ. ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬAಧ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.