ಚಿಕ್ಕಬಳ್ಳಾಪುರ: ರಾಜ್ಯದ ಗ್ರಾಮಾಂತರ ಪ್ರದೇಶಗಳೂ ಸೇರಿ ಸಾರಿಗೆ ವ್ಯವಸ್ಥೆ ವಂಚಿತ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಸರ್ಕಾರಿ ಸ್ವಾಮ್ಯದ ನಾಲ್ಕು ಸಾರಿಗೆ ನಿಗಮಗಳ ಮೂಲಕ ಸುಮಾರು 15 ಸಾವಿರ ಹೊಸ ಬಸ್ ಗಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
80 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಈ ದಿನ ನಾವು ಬ್ರಿಟೀಷರ ದಾಸ್ಯದಿಂದ ಮುಕ್ತಗೊಂಡ ದಿನ. ನಮ್ಮದೇ ಸಂವಿಧಾನ, ನಮ್ಮದೇ ಆಶೋತ್ತರಕ್ಕೆ ರೆಕ್ಕೆಯನ್ನ ನೀಡಿದ ದಿನ. ಈ ಸ್ವಾತಂತ್ರ್ಯಕ್ಕೆ ತಮ್ಮ ಬದುಕನ್ನೇ ತ್ಯಾಗ ಮಾಡಿದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ಸ್ಮರಿಸುವ ದಿನವಾಗಿದೆ ಎಂದರು.
ಸರ್ವತೋಮುಖ ಅಭಿವೃದ್ಧಿಗೆ ಒತ್ತು: ಸ್ವಾತಂತ್ರ್ಯವೆಂದರೆ ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲ. ಅದು ಬಡತನದಿಂದ, ಅನಕ್ಷರತೆಯಿಂದ, ಭ್ರಷ್ಟಾಚಾರದಿಂದ ಮತ್ತು ಅಸಮಾನತೆಯಿಂದ ಮುಕ್ತಿಪಡೆಯುವುದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಎಲ್ಲಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟಿದೆ. ಜನರ ಜೀವನಮಟ್ಟ ಸುಧಾರಿಸಲು ಪಂಚ ಗ್ಯಾರೆಂಟಿ ಯೋಜನೆ ನೀಡಿದೆ ಎಂದು ತಿಳಿಸಿದರು.
ಸಂಕಷ್ಟದ ಪರಿಸ್ಥಿತಿಯಲ್ಲಿಯೂ ರೈತರಿಗೆ ಬೆಂಗಾವಲಾಗಿ ನಿಂತು ಕುಡಿಯುವ ನೀರಿನ ಬವಣೆ, ಜಾನುವಾರುಗಳಿಗೆ ಮೇವು, ಬರಪರಿಹಾರದ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುತ್ತಿದೆ. ಶಿಕ್ಷಣದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ 16 ವರ್ಷದ ಒಳಗಿನ ಮಕ್ಕಳಲ್ಲಿ SCREEN TIME ಕಡಿಮೆ ಮಾಡುವುದು ಹಾಗೂ ಸಾಮಾಜಿಕ ಜಾಲತಾಣ ಬಳಕೆಯನ್ನು ಕಡಿಮೆ ಮಾಡಲು ಯೋಜನೆಯನ್ನು ರೂಪಿಸಲಾಗುತ್ತಿದೆ. ಈಗಿನ ಯುವ ಪೀಳಿಗೆಗಾಗಿ ನಿರುದ್ಯೋಗದ ಸಮಸ್ಯೆಯನ್ನು ಬಗೆಹರಿಸಲು ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳನ್ನು ಭರ್ತಿ ಮಾಡುವ ಕಾರ್ಯ ಹಾಗೂ ಯುವಕರಲ್ಲಿ ಕ್ರೀಡಾ ಮನೋಭಾವ ಮತ್ತು ನಾಯಕತ್ವದ ಗುಣ ಹೆಚ್ಚಿಸಲು ಯುವಕರ ಭಾರತ್ ಜೋಡೋ ಯೋಜನೆ ರೂಪಿಸಿದ್ದೇವೆ ಎಂದು ತಿಳಿಸಿದರು.
10 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ನಾನು ಸಾರಿಗೆ ಸಚಿವನಾದ ಕೂಡಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಹಾತ್ವಾಕಾಂಕ್ಷೆಯ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ನೀಡುವ ಯೋಜನೆಯನ್ನು 286 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 10 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗಿದೆ ಎಂದರು.
ಇದಲ್ಲದೇ, ನಾಲ್ಕು ಸಾರಿಗೆ ನಿಗಮಗಳ ವ್ಯಾಪ್ತಿಯ ಸಾರಿಗೆ ವಂಚಿತ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಹಾಗೂ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ 15,000 ಕ್ಕೂ ಹೆಚ್ಚು ಹೊಸ ಬಸ್ ಗಳ ಖರೀದಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಹಂತ ಹಂತವಾಗಿ ಹಣಕಾಸಿನ ಲಭ್ಯತೆಗೆ ಅನುಗುಣವಾಗಿ ಬಸ್ ಗಳನ್ನು ಖರೀದಿಸಿ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನು ಬಲಗೊಳಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಈ ಹಿಂದೆ ನಾನು ನಗರಾಭಿವೃದ್ಧಿ ಇಲಾಖೆ ಸಚಿವನಾಗಿದ್ದಾಗ ಸರ್ಕಾರದ 6ನೇ ಗ್ಯಾರೆಂಟಿಯಾದ ಭೂ-ಗ್ಯಾರೆಂಟಿ ಯೋಜನೆ ಅನುಷ್ಠಾನಕ್ಕಾಗಿ KTCP- 1961 ಕಾಯ್ದೆಯಲ್ಲಿ ಹಲವು ತಿದ್ದುಪಡಿಗಳನ್ನು ಮಾಡಿರುತ್ತೇನೆ. ಇ-ಖಾತೆಯು ಎಲ್ಲರಿಗೂ ಸುಲಭವಾಗಿ ಸಿಗುವಂತೆ ಇ-ಖಾತೆ ರೋಲ್-ಔಟ್ ಅಭಿಯಾನವನ್ನು ಆರಂಭಿಸಿರುತ್ತೇನೆ. ಅದರಂತೆ, ಬಿ-ಖಾತದಿಂದ ಎ-ಖಾತೆ ಪರಿವರ್ತನೆ ಮಾಡಲು ನಿಯಮವಾಳಿಗಳನ್ನು ರೂಪಿಸಲಾಗುತ್ತದೆ ಎಂದು ಅವರು ಹೇಳಿದರು.
ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ನಮ್ಮ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ರಾಜ್ಯದ ಜನರಿಗೆ ನೀಡಿದೆ. ಇದರಿಂದ ಕೋಟ್ಯಂತರ ಜನರು ಆರ್ಥಿಕ ಸ್ವಾವಲಂಬಿಗಳಾಗಿದ್ದಾರೆ ಎಂದು ಹೇಳಿದರು. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಸರ್ಕಾರದ ನೂರು ದಿನಗಳ ಆಡಳಿತದಲ್ಲಿ ಹಲವಾರು ಹೊಸ ಕಾರ್ಯಕ್ರಮಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

