ಬೆಂಗಳೂರು: ಜೀವನ ಸುಲಭವಲ್ಲ, ಆದರೂ ಹೇಗೋ ಸಂಭಾಳಿಸಿಕೊಂಡು ಹೋಗುತ್ತಿದ್ದೇನೆ ಎಂದು ಬೇಸರವನ್ನು ಹೊರಹಾಕಿದ್ದಾರೆ ಪವರ್ ಸ್ಟಾರ್ ಪತ್ನಿ, ನಿಮರ್ಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್.
ಅಷ್ಟಕ್ಕೂ ಅವರು ಈ ರೀತಿಯ ಬೇಸರ ವ್ಯಕ್ತಪಡಿಸಿದ್ದು ಏಕೆ? ಎಂಬುದನ್ನು ನೋಡಿದರೆ, ಕೆಲ ಕಿಡಿಗೇಡಿಗಳು ಗಜಪಡೆ ಎಂಬ ನಕಲಿ ಖಾತೆ ಸೃಷ್ಟಿಸಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರು. ಆರ್ಸಿಬಿ ಸೋಲುಗಳಿಗೆ ಅಶ್ವಿನಿ ಅವರೇ ಕಾರಣ ಎಂಬಂತೆ ಟೀಕಿಸಲಾಗಿತ್ತು. ಇದರ ವಿರುದ್ಧ ಅಪ್ಪು ಅಭಿಮಾನಿ ಆಂಜನೇಯ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಕಿಡಿಗೇಡಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ಈ ವೇಳೆ ಘಟನೆ ಬಗ್ಗೆ ನಿಮರ್ಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಈ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಯಾರೋ ಕಿಡಿಗೇಡಿಗಳ ದುಷ್ಕೃತ್ಯದ ಬಗ್ಗೆ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ಕುಮಾರ್ ಸರಳವಾಗಿ ಮತ್ತು ಪರೋಕ್ಷವಾಗಿ ಉತ್ತರ ಕೊಟ್ಟಿದ್ದಾರೆ. ಪಾಸಿಟಿವ್ ಮತ್ತು ನೆಗೆಟಿವ್ ವಿಚಾರಗಳನ್ನು ಹೇಗೆ ತಗೋತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆಪ್ಷನ್ ಇಲ್ಲ. ಲೈಫ್ ಗೋಸ್ ಆನ್. ಜೀವನ ಅಂದುಕೊಂಡಷ್ಟು ಸುಲಭವಲ್ಲ, ಹೇಗೋ ನಡೆಸಿಕೊಂಡು ಹೋಗುತ್ತಿದ್ದೇವೆ. ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕೆಂದು ತಿಳಿಸಿದರು.
ಅಶ್ವಿನಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದವರ ವಿರುದ್ಧ ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಕೂಡ ಇಂತಹ ಮನಸ್ಥಿತಿಗಳ ಬಗ್ಗೆ ಮಾತನ್ನಾಡಿದ್ದು, ಇಂತಹವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಒಟ್ಟಾರೆ, ಇಂತಹ ಟೀಕೆಗಳಿಗೆಲ್ಲ ಧೈರ್ಯವಾಗಿಯೇ ಉತ್ತರ ನೀಡುವ ದಿಟ್ಟ ಮಹಿಳೆ ಅಶ್ವಿನಿ ಅವರು ಮುಂದೆ ಅವರಿಗೆಲ್ಲ ಯಾವ ರೀತಿಯಲ್ಲಿ ಉತ್ತರ ನೀಡುತ್ತಾರೆ ಕಾದು ನೋಡಬೇಕಿದೆ.