ಬೆಂಗಳೂರು: ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ, ರಾಷ್ಟ್ರಧ್ವಜ ವಿಚಾರದಲ್ಲಿ ನಮಗೆ ದೇಶಭಕ್ತಿ ಪಾಠ ಮಾಡಲು ಹೊರಟಿದ್ದೀರಾ? ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನೆ ಮಾಡಿದ್ದಾರೆ.
ಹರ್ ಘರ್ ತಿರಂಗ ಯಾತ್ರೆ ಕುರಿತು ನರೇಂದ್ರ ಮೋದಿ ಅವರ ಕರೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಸ್ವಾತಂತ್ರ್ಯ ಬಂದಾಗಿನಿಂದಲೂ ಅಂದರೆ 1947ರಿಂದಲೂ ಈ ದೇಶದ ಕೋಟ್ಯಂತರ ದೇಶಪ್ರೇಮಿಗಳು ಸ್ವಯಂಪ್ರೇರಿತರಾಗಿ, ಅತ್ಯಂತ ಗೌರವದಿಂದ ರಾಷ್ಟ್ರಧ್ವಜವನ್ನು ಹಾರಿಸುತ್ತಾ ಬಂದಿದ್ದಾರೆ. ಇದಕ್ಕೆ ನಿಮ್ಮಿಂದ ಅಥವಾ ನಿಮ್ಮ ಸರ್ಕಾರದ ಪ್ರಚಾರದ ಗಿಮಿಕ್ಗಳಿಂದ ಯಾರೂ ಪಾಠ ಕಲಿಯಬೇಕಾಗಿಲ್ಲ ಎಂದಿದ್ದಾರೆ.
ನಿಮ್ಮ ಸಿದ್ಧಾಂತದ ಮೂಲವಾದ ಆರ್.ಎಸ್.ಎಸ್ (RSS) ಸಂಸ್ಥೆ ತನ್ನ ಕೇಂದ್ರ ಕಚೇರಿಯಲ್ಲಿ ಬರೋಬ್ಬರಿ 52 ವರ್ಷಗಳ ಕಾಲ ರಾಷ್ಟ್ರಧ್ವಜವನ್ನೇ ಹಾರಿಸಿರಲಿಲ್ಲ!ಇತಿಹಾಸದ ಪುಟಗಳಲ್ಲಿ ಧ್ವಜವನ್ನು ವಿರೋಧಿಸಿದವರು, ಜನವರಿ 26, 2002 ರಂದು ಮಾತ್ರ ಅಲ್ಲಿ ಮೊದಲ ಬಾರಿಗೆ ಧ್ವಜಾರೋಹಣ ಮಾಡಿದರು. ಇಂತಹ ಇತಿಹಾಸವಿರುವವರು ಇಂದು ನಮಗೆ ರಾಷ್ಟ್ರಾಭಿಮಾನದ ಬಗ್ಗೆ ಸರ್ಟಿಫಿಕೇಟ್ ನೀಡಲು ಬರುವುದು ಹಾಸ್ಯಾಸ್ಪದವಲ್ಲವೇ? ಎಂದಿದ್ದಾರೆ.
ದೇಶಭಕ್ತಿ ಎಂದರೆ ಕೇವಲ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಪಡೆಯುವುದಲ್ಲ; ದೇಶದ ಸಂವಿಧಾನವನ್ನು ರಕ್ಷಿಸುವುದು, ಪ್ರಜಾಪ್ರಭುತ್ವವನ್ನು ಉಳಿಸುವುದು ಮತ್ತು ಜನರ ಕಷ್ಟಗಳಿಗೆ ಸ್ಪಂದಿಸುವುದು. ದೇಶದಲ್ಲಿ ಯುವಕರಿಗೆ ಉದ್ಯೋಗವಿಲ್ಲ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ, ಬಡವರು-ಮಧ್ಯಮ ವರ್ಗದವರು ಸಂಕಷ್ಟದಲ್ಲಿದ್ದಾರೆ. ದೇಶದ ಜನತೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕೇವಲ ರಾಜಕೀಯ ಲಾಭಕ್ಕಾಗಿ ಮತ್ತು ಪಬ್ಲಿಸಿಟಿಗಾಗಿ ತ್ರಿವರ್ಣ ಧ್ವಜವನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಿ ಪ್ರಧಾನಿಗಳೇ ಎಂದು ಆಗ್ರಹಿಸಿದ್ದಾರೆ.

