ಉಪಯುಕ್ತ ಸುದ್ದಿ

ಅಣೆಕಟ್ಟೆ ಕುಸಿದ ೪೦ಕ್ಕೂ ಹೆಚ್ಚು ಸಾವು

Share It

ನೈರೋಬಿ(ಕೀನ್ಯಾ): ಕೀನ್ಯಾ ದೇಶದ ಪಶ್ಚಿಮ ಪ್ರದೇಶದಲ್ಲಿ ಅಣೆಕಟ್ಟು ಕುಸಿದು ಕನಿಷ್ಠ ೪೦ ಜನರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಅಣೆಕಟ್ಟೆ ಕುಸಿತದಿಂದ ಅಪಾರ ಪ್ರಮಾಣದ ನೀರು ಮನೆಗಳಿಗೆ ನುಗ್ಗಿದೆ. ಹಲವು ಪ್ರದೇಶಗಳಲ್ಲಿ ಸಂಪರ್ಕ ಕಡಿತಗೊಂಡಿದೆ. ಗ್ರೇಟ್ ರಿಫ್ಟ್ ವ್ಯಾಲಿ ಪ್ರದೇಶದ ಮೈ ಮಹಿಯು ಪ್ರದೇಶದ ಹಳೆಯ ಕಿಜಾಬೆ ಅಣೆಕಟ್ಟು ಸೋಮವಾರ ಬೆಳಗ್ಗೆ ಕುಸಿದಿದ್ದು, ೪೦ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೀನ್ಯಾದಲ್ಲಿ ಸುರಿಯುತ್ತಿರುವ ರಣಮಳೆಗೆ ಅ ಅಣೆಕಟ್ಟು ತುಂಬಿ ತುಳುಕುತ್ತಿವೆ. ಇದರ ಪರಿಣಾಮ ಅಣೆಕಟ್ಟೆ ಕುಸಿದು ೪೦ ಜನ ಸಾವನ್ನಪ್ಪಿದ್ದಾರೆ. ಮಳೆಯ ಇನ್ನಿತರ ಆರ್ಭಟಕ್ಕೆ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಪ್ರವಾಹದಿಂದಾಗಿ ಸುಮಾರು ೧೦೦ ಜನರು ಸಾವನ್ನಪ್ಪಿದ್ದಾರೆ. ಶಾಲೆಗಳಿಗೆ ರಜೆ ನೀಡಲಾಗಿದೆ. ಮಾರ್ಚ್ ಮಧ್ಯದಿಂದ ದೇಶಾದ್ಯಂತ ಮಳೆ ಸುರಿಯುತ್ತಿದ್ದು, ಹವಾಮಾನ ಇಲಾಖೆ ಭಾರೀ ಮಳೆ ಮುನ್ಸೂಚನೆ ನೀಡಿದೆ.

ದೇಶದ ಅಧ್ಯಕ್ಷ ವಿಲಿಯಂ ರುಟೊ ಅವರು ಸಂತ್ರಸ್ತರು ತಾತ್ಕಾಲಿಕ ಶಿಬಿರ ಬಳಸುವಂತೆ ಸೂಚನೆ ನೀಡಿದ್ದಾರೆ. ಜೋರು ಮಳೆಯಿಂದಾಗಿ ಪೂರ್ವ ಆಫ್ರಿಕಾದ ಹಲವು ಪ್ರದೇಶ ಪ್ರವಾಹ ಭೀತಿ ಎದುರಿಸುತ್ತಿವೆ. ಟಾಂಜಾನಿಯಾದಲ್ಲಿ ಈಗಾಗಲೇ ೧೫೫ ಜನರು ಸಾವನ್ನಪ್ಪಿದ್ದಾರೆ. ಬುರುಂಡಿಯಲ್ಲಿ ೨,೦೦,೦೦೦ಕ್ಕೂ ಹೆಚ್ಚು ಜನ ಬಾಧಿತರಾಗಿದ್ದಾರೆ.

ಕೀನ್ಯಾದ ಮುಖ್ಯ ವಿಮಾನ ನಿಲ್ದಾಣ ಶನಿವಾರ ಜಲಾವೃತಗೊಂಡಿತ್ತು. ಕೆಲವು ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ. ಪ್ರವಾಹಕ್ಕೊಳಗಾದ ರನ್‌ವೇ, ಟರ್ಮಿನಲ್‌ಗಳು ಮತ್ತು ಕಾರ್ಗೋ ವಿಭಾಗದ ವಿಡಿಯೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿವೆ.


Share It

You cannot copy content of this page