ಜಿಲ್ಲೆ ಶಿವಮೊಗ್ಗ:

ಶಿವಮೊಗ್ಗ- ಬೆಂಗಳೂರು ನಡುವೆ ವಿಮಾನ ಹಾರಾಟ ಮುಂದುವರೆಸುವಂತೆ ಸಂಸದ ಬಿ.ವೈ.ರಾಘವೇಂದ್ರ ಒತ್ತಾಯಿಸಿದ್ದಾರೆ.

Share It

ಮೇ 1ರಿಂದ ಬೆಂಗಳೂರು-ಶಿವಮೊಗ್ಗ-ಬೆಂಗಳೂರು ಇಂಡಿಗೋ ಏರ್​​ಲೈನ್ಸ್ ವಿಮಾನ ಸೇವೆ ಸ್ಥಗಿತಗೊಳ್ಳದಂತೆ ರಾಜ್ಯ ಸರ್ಕಾರ ತಕ್ಷಣವೇ ಸೂಕ್ತ ಕ್ರಮ ವಹಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್​ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತಂತೆ ಸಚಿವರಿಗೆ ಪತ್ರ ಬರೆದಿರುವ ಸಂಸದರು, ಯಶಸ್ವಿಯಾಗಿ ನಡೆಯುತ್ತಿರುವ ಬೆಂಗಳೂರು ಮತ್ತು ಶಿವಮೊಗ್ಗ ಮಾರ್ಗದ ವಿಮಾನಯಾನ ಸೇವೆ ಸ್ಥಗಿತಗೊಂಡಲ್ಲಿ ಶಿವಮೊಗ್ಗ, ಹಾವೇರಿ, ದಾವಣಗೆರೆ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಲಕ್ಷಾಂತರ ಜನರಿಗೆ ವಾಯು ಸಂಪರ್ಕದ ಅನುಕೂಲ ತಪ್ಪಲಿದೆ. ಇದು ಮಲೆನಾಡು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ‌.

ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಲೋಕಾರ್ಪಣೆಗೊಂಡ ನಂತರ, ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ 2,400ಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸಿವೆ. ನಿಲ್ದಾಣವು 1 ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ಸೇವೆ ನೀಡಿದೆ. ಆದರೆ, ಪ್ರಸಕ್ತ ಹೊಸ ಹಾರಾಟ ಕರ್ತವ್ಯ ಸಮಯ ಮಿತಿ (FDTL) ನಿಯಮಗಳಿಂದ ಉಂಟಾಗಿರುವ ಪೈಲಟ್ ಕೊರತೆ ಹಾಗೂ ನವೀಕರಿಸದ ಏರ್​​ಲೈನ್ ಒಪ್ಪಂದದ ಕಾರಣಗಳನ್ನು ಮುಂದಿಟ್ಟು ಇಂಡಿಗೋ ಸಂಸ್ಥೆ ಈ ಮಾರ್ಗವನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSIIDC) ಮತ್ತು ಇಂಡಿಗೋ ನಡುವಿನ ಮೂಲ ಒಪ್ಪಂದ ಆಗಸ್ಟ್ 2025ರಲ್ಲಿ ಮುಕ್ತಾಯವಾಗಿದ್ದು, ನಂತರವೂ ಕೂಡ ಇಂಡಿಗೋ ಸಂಸ್ಥೆ 6 ತಿಂಗಳ ಕಾಲ ಈ ಮಾರ್ಗದಲ್ಲಿ ವಿಮಾನಯಾನ ಮುಂದುವರೆಸಿತ್ತು. ಬದಲಾದ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ, ಜನರ ಅನುಕೂಲದ ದೃಷ್ಟಿಯಿಂದ ರಾಜ್ಯ ಸರ್ಕಾರ ತುರ್ತಾಗಿ ಇಂಡಿಗೋ ಸಂಸ್ಥೆಯವರೊಂದಿಗೆ ಮಾತನಾಡಿ, ಒಪ್ಪಂದ ನವೀಕರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ.


Share It

You cannot copy content of this page