ರಾಜಕೀಯ ಸಿನಿಮಾ ಸುದ್ದಿ

ರಾಜ್ಯದಲ್ಲಿ ಬಿಜೆಪಿ ಪರ ಪವನ್ ಕಲ್ಯಾಣ್ ಪ್ರಚಾರ

Share It

ಬೆಂಗಳೂರು: ತೆಲುಗು ಮತದಾರರನ್ನು ಸೆಳೆಯಲು ಟಾಲಿವುಡ್ ಪವರ್ ಸ್ಟಾರ್ ಹಾಗೂ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಅವರನ್ನು ರಾಜ್ಯಕ್ಕೆ ಬಿಜೆಪಿ ಕರೆ ತರುತ್ತಿದೆ.

ತೆಲುಗು ಭಾಷಿಗರು ಹೆಚ್ಚಿರುವ 4 ಕ್ಷೇತ್ರಗಳಲ್ಲಿ ಏಪ್ರಿಲ್ 17ರಂದು ಪವನ್ ಕಲ್ಯಾಣ್ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆ, ಏಪ್ರಿಲ್‌ 17 ರಂದು ರಾಜ್ಯದಲ್ಲಿ ನಟ ಪವನ್ ಕಲ್ಯಾಣ್ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಕ್ಯಾಂಪೇನ್ ಮಾಡಲಿದ್ದಾರೆ. ರಾಯಚೂರು, ಬಳ್ಳಾರಿ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಗಳಾದ ರಾಜಾ ಅಮರೇಶ್ವರ ನಾಯಕ, ಬಿ. ಶ್ರೀರಾಮುಲು, ಡಾ. ಸುಧಾಕರ್, ತೇಜಸ್ವಿ ಸೂರ್ಯ ಪರ ಮತಯಾಚಿಸಲಿದ್ದಾರೆ.

ಗಡಿಜಿಲ್ಲೆ ರಾಯಚೂರು ಆಂಧ್ರಪ್ರದೇಶದ ಜೊತೆ ನಂಟು ಹೊಂದಿದ್ದು, ತೆಲುಗು ಭಾಷಿಕರು ಹೆಚ್ಚಿದ್ದಾರೆ. ಜೊತೆಗೆ ಆಂಧ್ರದ ಸಿನಿ ತಾರೆಯರ ಪ್ರಭಾವವೂ ಅವರ ಮೇಲೆ ಹೆಚ್ಚಿದೆ. ಹೀಗಾಗಿ ಅಲ್ಲಿನ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಪರ ಪ್ರಚಾರ ನಡೆಸಿ ತೆಲುಗು ಭಾಷಿಗರನ್ನು ಸೆಳೆಯುವ ಪ್ರಯತ್ನ ನಡೆಸಲಿದ್ದಾರೆ.

ಇನ್ನೂ ಬಳ್ಳಾರಿಯಂತೂ ತೆಲುಗು ಸೀಮೆಯ ಒಡನಾಟ ಇರಿಸಿಕೊಂಡ ಕ್ಷೇತ್ರ. ಸಹಜವಾಗಿ ರಾಜಕಾರಣದಲ್ಲಿ ತೆಲುಗು ಪ್ರಭಾವ ಹೆಚ್ಚಾಗಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಪರ ಪವನ್ ಕಲ್ಯಾಣ್ ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿ ಮತದಾರರನ್ನು ಸೆಳೆಯಲಿದ್ದಾರೆ. ಶ್ರೀರಾಮುಲು ಸ್ನೇಹಿತ ಪ್ರಭಾವಿ ರಾಜಕಾರಣಿ ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶ ಮಾಡದಂತೆ ನಿರ್ಬಂಧ ಇರುವ ಹಿನ್ನೆಲೆ, ಪವನ್ ಕಲ್ಯಾಣ್ ಪ್ರಚಾರ ಪಕ್ಷಕ್ಕೆ ಹೆಚ್ಚಿನ ಲಾಭ ತಂದುಕೊಡಲಿದೆ ಎನ್ನಲಾಗಿದೆ.

ಚಿಕ್ಕಬಳ್ಳಾಪುರ ಕೂಡ ತೆಲುಗು ಭಾಷಿಗರು ಹೆಚ್ಚಿರುವ ಕ್ಷೇತ್ರ. ತೆಲುಗು ಸಿನಿಮಾಗಳು ಹೆಚ್ಚಾಗಿ ಪ್ರಭಾವ ಬೀರಿರುವ ಕ್ಷೇತ್ರ. ಹಾಗಾಗಿ ಇಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್ ಪರ ಪವನ್ ಕಲ್ಯಾಣ್ ಪ್ರಚಾರ ನಡೆಸಲಿದ್ದಾರೆ. ಆ ಮೂಲಕ ತೆಲುಗು ಮತದಾರರ ಮತಗಳು ಬಿಜೆಪಿ ಕಡೆ ವಾಲಿದರೆ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ ಎನ್ನುವುದು ಬಿಜೆಪಿ ಲೆಕ್ಕಾಚಾರ.

ರಾಜಧಾನಿ ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲೂ ತೆಲುಗು ಮಂದಿ ಹೆಚ್ಚಿದ್ದಾರೆ. ಈ ಹಿನ್ನೆಲೆ, ಪವನ್ ಕಲ್ಯಾಣ್ ಪ್ರಚಾರ ನಡೆಸಲಿದ್ದಾರೆ. ಇಲ್ಲಿ ಕಳೆದ 32 ವರ್ಷಗಳಿಂದಲೂ ಬಿಜೆಪಿಯೇ ಗೆಲುವು ಪಡೆಯುತ್ತಾ ಬಂದಿದೆ. ಕ್ಷೇತ್ರದಲ್ಲಿ ಅನಂತ್ ಕುಮಾರ್ 3 ದಶಕಗಳ ಕಾಲ ಹಿಡಿತ ಹೊಂದಿದ್ದರು. ಅವರ ನಿಧನದ ನಂತರವೂ ಕ್ಷೇತ್ರ ಬಿಜೆಪಿ ಹಿಡಿತದಲ್ಲೇ ಇದೆ. ತೇಜಸ್ವಿ ಸೂರ್ಯ 2ನೇ ಬಾರಿ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಈ ಬಾರಿ ಗೆಲುವಿಗಾಗಿ ಪೈಪೋಟಿ ಜೋರಾಗಿದೆ. ಸೌಮ್ಯಾ ರೆಡ್ಡಿ ಅವರು ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ್ದು, ತೆಲುಗು ಭಾಷಿಕರ ಮೇಲೆ ರಾಮಲಿಂಗಾ ರೆಡ್ಡಿ ಕುಟುಂಬದ ಹಿಡಿತ ಇದೆ. ಹಾಗಾಗಿ ತೆಲುಗು ಮತದಾರರು ಬಿಜೆಪಿಯಿಂದ ದೂರ ಸರಿಯದಂತೆ ಮಾಡಲು ಪವನ್ ಕಲ್ಯಾಣ್ ಅವರನ್ನು ಕರೆತಂದು ಪ್ರಚಾರ ಮಾಡಿಸಲಾಗುತ್ತಿದೆ ಎನ್ನಲಾಗಿದೆ


Share It

You cannot copy content of this page