ಹಾಸನ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪೆನ್ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಲಿಖಿತ್ಗೌಡ ಹಾಗೂ ಚೇತನ್ಗೆ 14 ದಿನ ನ್ಯಾಯಾಂಗ ಬಂಧನ ಒಪ್ಪಿಸಿ ಹಾಸನ ಜೆ.ಎಂ.ಎಫ್.ಸಿ ಕೋರ್ಟ್ ಜಡ್ಜ್ ಆದೇಶಿಸಿದ್ದಾರೆ.
ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಆಪ್ತರಾಗಿರುವ ಲಿಖಿತ್ಗೌಡ ಮತ್ತು ಚೇತನ್ ಮೇಲೆ ಏ.23ರಂದು ಹಾಸನ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಹಸ್ತಾಂತರ ಮಾಡಿಕೊಂಡು ಎಸ್ಐಟಿ ಪೊಲೀಸರು ತನಿಖೆ ನಡೆಸುತ್ತಿದ್ದು, ಭಾನುವಾರ ಬೆಳಗ್ಗೆ ಲಿಖಿತ್ಗೌಡ, ಚೇತನ್ನನ್ನು ಬಂಧಿಸಿ, ಸ್ಥಳ ಮಹಜರು ನಂತರ ಜಡ್ಜ್ ಮುಂದೆ ಹಾಜರುಪಡಿಸಿದ್ದರು. ಇದೀಗ ಆರೋಪಿಗಳಿಗೆ ಮೇ 25 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ವಿಡಿಯೋ ವೈರಲ್ ಕೇಸ್ ಸಂಬಂಧ ಮತ್ತಿಬ್ಬರು ವಶಕ್ಕೆ : ರಾಜ್ಯವೇ ಬೆಚ್ಚಿ ಬೀಳಿಸೊ ಅಶ್ಲೀಲ ವೀಡಿಯೋ ವೈರಲ್ ಪ್ರಕರಣ ಸಂಬಂಧ ತನಿಖೆ ಚುರುಕುಗೊಂಡಿದೆ. ಇದೇ ಅಶ್ಲೀಲ ವಿಡಿಯೋಗಳ ವೈರಲ್ ಪ್ರಕರಣದ ಬೆನ್ನತ್ತಿರುವ ಎಸ್ಐಟಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿ ಚೇತನ್ ಸೇರಿ ಮತ್ತಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಹಿನ್ನಲೆ ಹಾಸನ ಪೊಲೀಸ್ ಠಾಣೆಯಲ್ಲಿ ಬೀಡುಬಿಟ್ಟಿರುವ 20ಕ್ಕೂ ಹೆಚ್ಚು ಎಸ್ಐಟಿ ಅಧಿಕಾರಿಗಳ ತಂಡದಿಂದ ತನಿಖೆ ಶುರುವಾಗಿದೆ.
ಈ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಮೂಡಿಗೆರೆ ತಾಲೂಕಿನ ಸಂಸೆ ಗ್ರಾಮದ ಪ್ರಜ್ವಲ್ ಎಂಬ ಆರೋಪಿಯನ್ನು ಕುದುರೆಮುಖ ಠಾಣೆ ಪೊಲೀಸರು ಬಂಧಿಸಿದ್ದರು. ಈ ಆರೋಪಿ ಪ್ರಜ್ವಲ್, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳು ಎಂದು ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದ. ಇದರಿಂದ ಈ ಪ್ರಜ್ವಲ್ ವಿರುದ್ಧ ಕುದುರೆಮುಖ ಠಾಣೆಯಲ್ಲಿ ಐಪಿಸಿ ಸೆಕ್ಷನ್ 67,67 (ಎ) ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಪ್ರಜ್ವಲ್ ಟ್ರೋಲ್ ಪೇಜ್ ಅಡ್ಮಿನ್ ಕೂಡ ಆಗಿದ್ದಾನೆ.