ಜೈಪುರ: ಟಾಟಾ ಐಪಿಎಲ್ನ 19 ನೇ ಪಂದ್ಯದಲ್ಲಿ ಸೆಣಸಾಟ ನಡೆಸಿದ ಆರ್ಸಿಬಿ ಮತ್ತು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ತಂಡಕ್ಕೆ 183 ರನ್ಗಳ ಗುರಿ ನೀಡಿದೆ.
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸಾಮ್ಸನ್ ಅವರು, ಟಾಸ್ ಗೆದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಬ್ಯಾಟಿಂಗ್ ಆರಂಭಿಸಿದ ವಿರಾಟ್ ಕೋಹ್ಲಿ ಮತ್ತು ಪಾಪ್ ಡುಪ್ಲಸಿಸ್ ಮೊದಲ ವಿಕೆಟ್ ಜತೆಯಾಟದಲ್ಲಿ 14 ಓವರ್ಗಳಲ್ಲಿ 125 ರನ್ಗಳ ಜತೆಯಾಟ ನೀಡುವ ಮೂಲಕ ಬೃಹತ್ ಇನ್ನಿಂಗ್ಸ್ನ ಮುನ್ಸೂಚನೆ ನೀಡಿದರು. ಒಂದು ಬದಿಯಲ್ಲಿ ಕಿಂಗ್ ಕೋಹ್ಲಿ ಆರ್ಭಟ ನಡೆಸುತ್ತಿದ್ದರೆ, ಮತ್ತೊಂದು ತುದಿಯಲ್ಲಿ ನಾಯಕ ಪಾಪ್ 33 ಎಸೆತಗಳಲ್ಲಿ 44 ರನ್ಗಳಿಸಿ ಸ್ಪಿನ್ನರ್ ಚಾಹಲ್ಗೆ ವಿಕೆಟ್ ಒಪ್ಪಿಸಿದರು.
ನಂತರ ಕ್ರೀಸ್ಗೆ ಬಂದ ಗ್ಲೇನ್ ಮ್ಯಾಕ್ಸವೆಲ್ ಕೇವಲ 1 ರನ್ಗೆ ವಿಕೆಟ್ ಒಪ್ಪಿಸಿದರೆ, ಮೊದಲ ಪಂದ್ಯವನ್ನಾಡಿದ ಸೌರವ್ ಚೌಹಾಣ್ 6 ಎಸೆತಗಳಲ್ಲಿ 9 ರನ್ಗಳನ್ನಷ್ಟೇ ಗಳಿಸಿದರು. ಒಂದು ಸಿಕ್ಸರ್ ಸಿಡಿಸಿ ಭರವಸೆ ಮೂಡಿಸಿದ್ದ ಅವರು, ಸ್ಪಿನ್ನರ್ ಚಾಹಲ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಕ್ರೀಸಿಗಿಳಿದ ಕೆಮರಾನ್ ಗ್ರೀನ್ ಅವರು, ಆರು ಎಸೆತಗಳಲ್ಲಿ 5 ರನ್ಗಳಿಸಿ, ಕೋಹ್ಲಿಗೆ ಸಾಥ್ ನೀಡಿದರು.
ಮತ್ತೊಂದು ತುದಿಯಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ವಿರಾಟ್ ಕೋಹ್ಲಿ ಅವರು, ಐಪಿಎಲ್ನಲ್ಲಿ ಎಂಟನೇ ಶತಕ ಗಳಿಸುವ ಮೂಲಕ ಅತಿ ಹೆಚ್ಚು ಶತಕ ಗಳಿಸಿದ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಬಾಧಿತವಾಗಿಸಿಕೊಂಡರು. ಜತೆಗೆ, ಆರೆಂಜ್ ಕ್ಯಾಪ್ ಅನ್ನು ಕೂಡ ತಮ್ಮಲ್ಲಿಯೇ ಉಳಿಸಿಕೊಂಡರು. 67 ಎಸೆತಗಳಲ್ಲಿ ಶತಕ ಪೂರೈಸಿದ ಕೋಹ್ಲಿ, ಅಂತಿಮವಾಗಿ 72 ಎಸೆತಗಳಲ್ಲಿ 113 ರನ್ಗಳಿಸಿ ಅಜೇಯವಾಗಿ ಉಳಿದರು. ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಚಹಾಲ್ ಅವರು, 34 ರನ್ ನೀಡಿ ಎರಡು ವಿಕೆಟ್ ಪಡೆದರು.
ಬ್ಯಾಟಿಂಗ್ ಆರಂಭಿಸಿರುವ ರಾಜಸ್ಥಾನ್ ರಾಯಲ್ಸ್ ತಂಡ 7 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿದೆ. ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರೆ, ಜೋಸ್ ಬಟ್ಲರ್21 ಎಸೆತಗಳಲ್ಲಿ 44 ರನ್ಗಳಿಸಿ ಆಟವಾಡುತ್ತಿದ್ದರೆ, ಮತ್ತೊಂದು ತುದಿಯಲ್ಲಿ ನಾಯಕ ಸಂಜು ಸ್ಯಾಮ್ಸನ್ 18 ಎಸೆತಗಳಲ್ಲಿ 28 ರನ್ಗಳಿಸಿ ಆಟವಾಡುತ್ತಿದ್ದಾರೆ. ಗೆಲುವಿಗೆ ರಾಜಸ್ಥಾನ ರಾಯಲ್ಸ್ ತಂಡ 75 ಎಸೆತಗಳಲ್ಲಿ 114 ರನ್ ಗಳಿಸಬೇಕಿದೆ.