ನಾಡಿ (ಫಿಜಿ): ಹೆಚ್ಚುತ್ತಿರುವ ವಿಪರೀತ ಶಾಖವು ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಜೀವಕ್ಕೆ ಹೆಚ್ಚಿನ ಅಪಾಯವನ್ನು ತಂದೊಡ್ಡುತ್ತಿದೆ ಎಂದು ವಿಶ್ವಸಂಸ್ಥೆಯ ಹವಾಮಾನ ವಿಭಾಗ ಎಚ್ಚರಿಸಿದೆ.
ಫಿಜಿಯ ನಾಡಿಯಲ್ಲಿ ನಡೆಯುತ್ತಿರುವ ಪ್ರಿ-ಕಾಪ್ ಶೃಂಗಸಭೆಯಲ್ಲಿ ಮಾತನಾಡಿರುವ ಅವರು, ಕಳೆದ 5 ವರ್ಷಗಳಲ್ಲಿ ತೀವ್ರ ಶಾಖದಿಂದಾಗಿ ಗರ್ಭಾವಸ್ಥೆಯಲ್ಲಿ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಆರೋಗ್ಯ ತಜ್ಞರು ಗಮನಿಸಿದ್ದಾರೆ ಎಂಬ ಹೊಸ ಸಮೀಕ್ಷೆ ವರದಿಯನ್ನು ಉಲ್ಲೇಖಿಸಿದ್ದಾರೆ. ಈ ಸಮೀಕ್ಷೆಯನ್ನು ಐದು ಖಂಡಗಳಲ್ಲಿ ನಡೆಸಲಾಗಿದ್ದು, ಮೂರನೇ ಎರಡಕ್ಕಿಂತ ಹೆಚ್ಚು ಆರೋಗ್ಯ ತಜ್ಞರು ಇದನ್ನು ದೃಢಪಡಿಸಿದ್ದಾರೆ.
ಹೆಚ್ಚುತ್ತಿರುವ ತಾಪಮಾನ ಎಂದರೆ ಗರ್ಭಾವಸ್ಥೆಯಲ್ಲಿ ಹೆಚ್ಚುತ್ತಿರುವ ಅಪಾಯ ಎಂದೇ ಅರ್ಥ ಎಂದು ಸೈಮನ್ ಸ್ಟೀಲ್ ಹೇಳಿದ್ದಾರೆ. ಹವಾಮಾನ ವೈಪರೀತ್ಯದಿಂದ ವಿಪರೀತ ಶಾಖವು ಅವಧಿಪೂರ್ವ ಹೆರಿಗೆ, ಮೃತ ಶಿಶು ಜನನ, ಕಡಿಮೆ ತೂಕ ಮತ್ತು ತಾಯಂದಿರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತಿದೆ. ಹವಾಮಾನ ಬಿಕ್ಕಟ್ಟಿನ ಈ ಸ್ವರೂಪವು ಜಾಗತಿಕ ಮಟ್ಟದಲ್ಲಿ ತಾಯಿ ಮತ್ತು ಮಗುವಿನ ಜೀವಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ವಿಜ್ಞಾನಿಗಳ ಪ್ರಕಾರ, ಹವಾಮಾನ ಬದಲಾವಣೆ ತೀವ್ರ ಹವಾಮಾನ ವೈಪರೀತ್ಯಗಳನ್ನು ಮತ್ತಷ್ಟು ಉಲ್ಬಣಗೊಳಿಸುತ್ತಿದೆ. ಜಾಗತಿಕ ತಾಪಮಾನದ ದಾಖಲೆಗಳನ್ನು ಮುರಿಯತ್ತಿದೆ. ಯುರೋಪಿಯನ್ ಯೂನಿಯನ್ನ ಕೊಪರ್ನಿಕಸ್ ಹವಾಮಾನ ವೀಕ್ಷಣಾಲಯದ ದತ್ತಾಂಶಗಳ ಪ್ರಕಾರ, ಪಶ್ಚಿಮ ಯುರೋಪ್ನಿಂದ ಹಿಡಿದು ಸಾಹೇಲ್ ಮತ್ತು ಮಧ್ಯ ಅಮೆರಿಕದವರೆಗಿನ ಸುಮಾರು 33 ದೇಶಗಳಲ್ಲಿ ಈ ವರ್ಷದ ಜುಲೈ ತಿಂಗಳಲ್ಲಿ ಸಾರ್ವಕಾಲಿಕ ಗರಿಷ್ಠ ತಾಪಮಾನ ದಾಖಲಾಗಿದೆ.
‘ಶಾಖ ಕಣ್ಣಿಗೆ ಕಾಣದ ಕೊಲೆಗಾರ’: ವೆಲ್ಕಮ್ ಚಾರಿಟಬಲ್ ಫೌಂಡೇಶನ್ ಇಂಗ್ಲೆಂಡ್, ಆಸ್ಟ್ರೇಲಿಯಾ, ಭಾರತ, ಬ್ರೆಜಿಲ್ ಮತ್ತು ಜಿಂಬಾಬ್ವೆಯ 1 ಸಾವಿರ ಪ್ರಸೂತಿ ತಜ್ಞರು ಮತ್ತು ವೈದ್ಯರನ್ನು ಒಳಗೊಂಡಂತೆ ಈ ಸಮೀಕ್ಷೆಯನ್ನು ನಡೆಸಿತ್ತು. ಈ ಕುರಿತು ಮಾತನಾಡಿರುವ ಸಂಸ್ಥೆಯ ಅಧ್ಯಕ್ಷೆ ಹಾಗೂ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್, “ವಿಪರೀತ ಶಾಖವು ಕಣ್ಣಿಗೆ ಕಾಣದ ಕೊಲೆಗಾರನಿದ್ದಂತೆ. ಹವಾಮಾನ ಬದಲಾವಣೆಯಿಂದಾಗಿ ತಾಯಂದಿರು ಮತ್ತು ಶಿಶುಗಳು ನಿರಂತರ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಜಾಗತಿಕ ನಾಯಕರ ಬಳಿ ಇದಕ್ಕೆ ಅಗತ್ಯವಿರುವ ಪುರಾವೆಗಳು ಮತ್ತು ಪರಿಹಾರಗಳಿವೆ. ಈಗ ಅವರು ಕಾರ್ಯಪ್ರವೃತ್ತರಾಗಬೇಕಿದೆ ಎಂದು ತಿಳಿಸಿದ್ದಾರೆ.
ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಬಹುತೇಕ ಎಲ್ಲ ವೈದ್ಯರು ತೀವ್ರ ಶಾಖದ ಪರಿಣಾಮದಿಂದ ಬಳಲುತ್ತಿರುವ ತಾಯಂದಿರು ಅಥವಾ ಶಿಶುಗಳಿಗೆ ಚಿಕಿತ್ಸೆ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ. ತೀವ್ರ ಶಾಖದ ಕಾರಣದಿಂದಾಗಿ ಶಿಶುಗಳಲ್ಲಿ ಕಡಿಮೆ ತೂಕ, ಬೆಳವಣಿಗೆ ಕುಂಠಿತ, ಹಾಲುಣಿಸುವಲ್ಲಿ ತೊಂದರೆ ಮತ್ತು ನಿರ್ಜಲೀಕರಣದ ಸಮಸ್ಯೆಗಳು ಕಂಡುಬಂದಿವೆ ಎಂದು ಅವರು ತಿಳಿಸಿದ್ದಾರೆ.
ಫಿಜಿ ಮತ್ತು ತುವಾಲು ದ್ವೀಪಗಳಲ್ಲಿ ನಡೆಯುತ್ತಿರುವ ಈ ಪ್ರಿ-ಕಾಪ್31 ಶೃಂಗಸಭೆಯು ಹವಾಮಾನ ಬದಲಾವಣೆಯ ಮುಂಚೂಣಿಯಲ್ಲಿರುವ ಪೆಸಿಫಿಕ್ ರಾಷ್ಟ್ರಗಳ ಜನರ ಜೀವನದತ್ತ ಜಾಗತಿಕ ಗಮನ ಸೆಳೆಯಲು ಅತ್ಯಂತ ಪ್ರಮುಖವಾಗಿದೆ. ಮುಂದಿನ ತಿಂಗಳು ಟರ್ಕಿಯಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಶೃಂಗಸಭೆಗೆ ಇದು ಪೂರ್ವಭಾವಿ ಸಭೆಯಾಗಿದೆ.
