ಬೆಂಗಳೂರು: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ವರ್ಗಾಯಿಸಲಾಗಿದೆ. ಜೈಲಿನ ಬ್ಯಾರಕ್ನಲ್ಲಿ ಸ್ಮಾರ್ಟ್ಫೋನ್, ಚಾರ್ಜರ್, ಸಿಮ್ ಕಾರ್ಡ್ ಹಾಗೂ ಪೆನ್ಡ್ರೈವ್ ಪತ್ತೆಯಾದ ಘಟನೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಏಕಾಏಕಿ ವರ್ಗಾವಣೆಗೆ ಕಾರಣವೇನು?: ಪ್ರಜ್ವಲ್ ಅವರ ಬ್ಯಾರಕ್ಗೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿದಾಗ ಮೊಬೈಲ್, ಚಾರ್ಜರ್, ಆಂಧ್ರಪ್ರದೇಶ ಮೂಲದ ಸಿಮ್ ಕಾರ್ಡ್ ಮತ್ತು ಪೆನ್ಡ್ರೈವ್ ಪತ್ತೆಯಾಗಿತ್ತು. ಜೈಲಿನಲ್ಲಿದ್ದೂ ಅವರು ಹೊರಗಿನವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಬಹಿರಂಗವಾದದ್ದು ಭಾರಿ ಕೋಲಾಹಲ ಸೃಷ್ಟಿಸಿತ್ತು.
ಈ ಹಿನ್ನೆಲೆಯಲ್ಲಿ ಮೊದಲು ಅವರಿಗಿದ್ದ ಪ್ರತ್ಯೇಕ ಸೆಲ್ ಸೌಲಭ್ಯ ರದ್ದುಪಡಿಸಿ, ಸಿಸಿಟಿವಿ ಕಣ್ಗಾವಲಿನ ಸಾಮಾನ್ಯ ಕೈದಿಗಳ ಬ್ಯಾರಕ್ಗೆ ಸ್ಥಳಾಂತರಿಸಲಾಗಿತ್ತು. ಆದರೆ ಬೆಂಗಳೂರಿನಲ್ಲಿ ಪ್ರಭಾವ ಬಳಸಿ ಮತ್ತೆ ಅಕ್ರಮ ಚಟುವಟಿಕೆ ಮುಂದುವರಿಯುವ ಆತಂಕ ಮತ್ತು ಭದ್ರತಾ ಕಾರಣಗಳಿಂದ, ಕಠಿಣ ನಿಯಮಗಳಿರುವ ದೂರದ ಹಿಂಡಲಗಾ ಜೈಲಿಗೆ ವರ್ಗಾಯಿಸಲು ಕಾರಾಗೃಹ ಇಲಾಖೆ ಮುಂದಾಗಿದೆ. ಕಾರಾಗೃಹ ಮತ್ತು ಸುಧಾರಣೆ ಸೇವೆ ಇಲಾಖೆ ಡಿಜಿಪಿ ಅಲೋಕ್ಕುಮಾರ್ ಅವರು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.
ತನಿಖೆಯಲ್ಲಿ ಬಯಲಾದ ವಿಷಯ: ಮೊಬೈಲ್ ಬಳಕೆ ಪ್ರಕರಣ ಸಂಬಂಧ ಪ್ರಜ್ವಲ್ ಹಾಗೂ ಸಹಾಯ ಮಾಡಿದ್ದ ವಿಚಾರಣಾಧೀನ ಕೈದಿ ಪ್ರತಾಪ್ ರೇ ಇಬ್ಬರನ್ನೂ ಎಸಿಜೆಎಂ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಮೊಬೈಲ್ ತಂದುಕೊಟ್ಟದ್ದು ಯಾರು, ಯಾರ ಜತೆ ಮಾತನಾಡಿದ್ದು ಎಂಬ ಪ್ರಶ್ನೆಗೆ ಪ್ರಜ್ವಲ್ ಸ್ಪಷ್ಟ ಉತ್ತರ ನೀಡಿಲ್ಲ. ಪ್ರತಾಪ್ ರೇ ಮೊಬೈಲ್ ಕೊಟ್ಟಿದ್ದು, ಅದನ್ನೇ ಬಳಸುತ್ತಿದ್ದೆ, ಬೇರೆ ಮಾಹಿತಿ ಗೊತ್ತಿಲ್ಲ ಎಂದು ಪ್ರಜ್ವಲ್ ಹೇಳಿಕೆ ನೀಡಿದ್ದಾರೆ. ಪ್ರತಾಪ್ ರೇ ಕೂಡ ತನಗೆ ಮೊಬೈಲ್ಗೂ ಸಂಬಂಧವಿಲ್ಲ ಎಂದು ಹೇಳಿದ್ದಾನೆ. ಪ್ರಜ್ವಲ್, ಜೈಲಿನಿಂದಲೇ ತಂದೆ ರೇವಣ್ಣ, ತಾಯಿ ಭವಾನಿ ಹಾಗೂ ಸ್ನೇಹಿತರಿಗೆ ಮೊಬೈಲ್ ಕರೆ ಮಾಡಿ ಮಾತನಾಡಿರುವುದು ತನಿಖೆಯಲ್ಲಿ ಗೊತ್ತಾಗಿತ್ತು.
ದರ್ಶನ್ ಪ್ರಕರಣದಲ್ಲಿ ಇದೇ ಮಾದರಿ: ಇದಕ್ಕೂ ಮೊದಲು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಸಿಕ್ಕ ವಿವಾದ ಭುಗಿಲೆದ್ದಾಗಲೂ ಅವರನ್ನು ಬಳ್ಳಾರಿ ಜೈಲಿಗೆ ಹಾಗೂ ಇತರ ಆರೋಪಿಗಳನ್ನು ಹಿಂಡಲಗಾ ಸೇರಿದಂತೆ ವಿವಿಧ ಜಿಲ್ಲೆಗಳ ಜೈಲುಗಳಿಗೆ ಸ್ಥಳಾಂತರಿಸಲಾಗಿತ್ತು. ಈಗ ಅದೇ ಮಾದರಿಯಲ್ಲಿ ಪ್ರಜ್ವಲ್ ವರ್ಗಾವಣೆಯಾಗಿದೆ. ಒಟ್ಟಾರೆ, ಜೈಲಿನ ಒಳಗೂ ಅಕ್ರಮ ಸಂಪರ್ಕ ಮತ್ತು ಸೌಲಭ್ಯಗಳ ವಿವಾದ ಮುಂದುವರಿದಿರುವುದು ಕಾರಾಗೃಹ ಇಲಾಖೆಯ ಭದ್ರತೆ ಮತ್ತು ನಿರ್ವಹಣೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
