ಬೆಂಗಳೂರು: ಡೆಡ್ಲಿ ಶ್ವಾನವೊಂದು ಏಳು ಮಕ್ಕಳಿಗೆ ಕಚ್ಚಿ ಗಾಯಗೊಳಿಸಿದ್ದು, ಅದರಲ್ಲಿ ಒಂದು ಮಗು ಸಾವನ್ನಪ್ಪಿರುವ ಘಟನೆ ಸಗಮಕುಂಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಲಾವಣ್ಯ ಎಂಬ ಬಾಲಕಿ ಸಾವನ್ನಪ್ಪಿದ್ದು, ಆಕೆಯ ಜತೆಗೆ ಮತ್ತೇ ಏಳು ಮಕ್ಕಳಿಗೆ ನಾಯಿ ಕಚ್ಚಿದ್ದರಿಂದ ಆ ಮಕ್ಕಳೆಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ, ಘಟನೆ ಹದಿನೈದು ದಿನ ಕಳೆದಿದ್ದರೂ, ಯಾವುದೇ ಅಧಿಕಾರಿಗಳಿಗೆ ಈ ಘಟನೆಯ ಬಗ್ಗೆ ಮಾಹಿತಿಯೇ ಇಲ್ಲ ಎನ್ನಲಾಗುತ್ತಿದೆ.
ಸಗಮಕುಂಟಾ ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ಬಗ್ಗೆ ಪಿಡಿಒ ಕರಿಯಪ್ಪ ಅವರಿಗೆ ಮಾಹಿತಿಯೇ ಇಲ್ಲವಂತೆ, ಈ ಬಗ್ಗೆ ಗ್ರಾಮಸ್ಥರು, ಪಿಡಿಒ ಮತ್ತು ಅಧಿಕಾರಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಹಸೀಲ್ದಾರ್ ಸುರೇಶ್ ವರ್ಮಾ ಕೂಡ ಘಟನೆಯ ಬಗ್ಗೆ ಯಾವುದೇ ಮಾಹಿತಿ ನನಗಿಲ್ಲ ಎನ್ನುತ್ತಿದ್ದಾರೆ.
ಹದಿನೈದು ದಿನಗಳ ಹಿಂದೆಯೇ ಬೀದಿ ನಾಯಿಯೊಂದು ಏಳು ಮಕ್ಕಳಿಗೆ ನಾಯಿ ಕಚ್ಚಿ ಗಾಯಗೊಳಿಸಿತ್ತು. ಅದರಲ್ಲಿ ಲಾವಣ್ಯ ಎಂಬ ಬಾಲಿಕೆಗೆ ಲಸಿಕೆ ಕೊಡಿಸಿದ್ದ ಪೋಷಕರು ನಂತರ ಮನೆಗೆ ಕರೆತಂದಿದ್ದರು. ಎರಡು ದಿನದ ನಂತರ ಮತ್ತೇ ಇಂಜೆಕ್ಷನ್ ಹಾಕಿಸಲು ಬರಲು ವೈದ್ಯರು ಹೇಳಿದ್ದರು. ಆದರೆ, ಅಷ್ಟರಲ್ಲಿ ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ.
ಲಾವಣ್ಯ ಸಾವಿನಿಂದ ಇನ್ನುಳಿದ ಮಕ್ಕಳ ಪೋಷಕರು ಗಾಬರಿಯಾಗಿದ್ದು, ತಮ್ಮ ಮಕ್ಕಳಿಗೆ ಏನಾಗುತ್ತದೆಯೋ ಎಂಬ ಆತಂಕ ಗ್ರಾಮದಲ್ಲಿ ಮನೆ ಮಾಡಿದಿದೆ. ಆದರೆ, ಇಷ್ಟೊಂದು ಗಂಭೀರ ಘಟನೆ ನಡೆದಿದ್ದರೂ, ಕನಿಷ್ಠ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಘಟನೆಯ ಕುರಿತು ಯಾವುದೇ ಮಾಹಿತಿ ಇಲ್ಲವಾಗಿದೆ.