ಬೆಂಗಳೂರು: ಪೆನ್ ಡ್ರೈವ್ ಪ್ರಕರಣದಲ್ಲಿ ಯಾರಾದರೂ ಮಹಿಳೆಯರನ್ನು ಬ್ಲಾಕ್‌ಮೇಲ್ ಮಾಡಲು ಯತ್ನಿಸಿದರೆ ಎಸ್‌ಐಟಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಸಿದ್ದಾರೆ.
ನಗರದಲ್ಲಿಂದು ಪೆನ್ ಡ್ರೈವ್ ಪ್ರಕರಣದ ಬಗ್ಗೆ ಮಾತನಾಡಿದ ಅವರು, ವಿಡಿಯೋ ಇವೆ ಎಂದು ಮಹಿಳೆಯರನ್ನು ಯಾರಾದರೂ ಬ್ಲಾಕ್‌ಮೇಲ್ ಮಾಡಲು ಯತ್ನಿಸಿದರೆ ಅದನ್ನು ಎಸ್‌ಐಟಿ ಗಮನಿಸಿಕೊಳ್ಳುತ್ತದೆ. ಈ ಬಗ್ಗೆ ಸರ್ಕಾರ ಕೂಡ ಸ್ಪಷ್ಟ ಸೂಚನೆ ನೀಡಲಿದೆ ಎಂದರು. ಪ್ರಕರಣದ ಬಗ್ಗೆ ನಿನ್ನೆಯೇ ನಾನು ಸಂಪೂರ್ಣ ವಿವರಣೆ ನೀಡಿದ್ದೇನೆ.
ತನಿಖೆ ಸರಿಯಾಗಿಲ್ಲ ಎಂದು ಜೆಡಿಎಸ್ ಹೇಳಿದಾಕ್ಷಣ ಅದಕ್ಕೆ ನಾನು ಉತ್ತರ ಕೊಡಬೇಕು ಎಂದಿಲ್ಲ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಎಸ್‌ಐಟಿ ತನಿಖೆ ನಡೆಯುತ್ತಿದೆ. ಪ್ರತಿ ದಿನ ಏನಾಗಿದೆ ಎಂದು ಬಹಿರಂಗವಾಗಿ ವಿವರಣೆ ನೀಡಲು ಸಾಧ್ಯವಿಲ್ಲ. ಬಹಳಷ್ಟು ವಿಚಾರಗಳು ನಮಗೇ ಗೊತ್ತಿರುವುದಿಲ್ಲ. ಎಲ್ಲದಕ್ಕೂ ಉತ್ತರ ಕೊಡುತ್ತಾ ಇರಲು ಸಾಧ್ಯವೇ? ಎಂದು ಪ್ರಶ್ನಿಸಿದರು.