ಬೆಂಗಳೂರು: : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆರಾಯನ ದರ್ಶನ ಇಲ್ಲದೇ ಬಿಸಿಲಿನ ಧಗೆಗೆ ಬೇಸತ್ತು ಹೋಗಿದ್ದರು.
ಕಳೆದ 4 ದಶಕಗಳಲ್ಲಿ ಏಪ್ರಿಲ್ ತಿಂಗಳಲ್ಲಿ ಶೂನ್ಯ ಮಳೆ ದಾಖಲಾಗಿತ್ತು. ಅಲ್ಲದೇ ಸರಾಸರಿ ಗರಿಷ್ಟ ಉಷ್ಣತಾಪಮಾನ 37° ಯಿಂದ 39° ವರೆಗೆ ದಾಖಲಾಗಿತ್ತು. ಮೇ ತಿಂಗಳು ಆರಂಭವಾಗುತ್ತಿದ್ದಂತೆ ಮಳೆರಾಯನ ಆಗಮನದಿಂದ ಕಾದ ಕಾವಲಿಯಾಗಿದ್ದ ಬೆಂಗಳೂರು ಇದೀಗ ನಿಧಾನವಾಗಿ ತಂಪಾಗಿದ್ದು, ನಿನ್ನೆ ಮೆಜೆಸ್ಟಿಕ್, ಕೆ.ಆರ್ ಸರ್ಕಲ್, ಟೌನ್ ಹಾಲ್, ಕನಕಪುರ ರಸ್ತೆ, ಕಾರ್ಪೋರೇಷನ್, ವಿಧಾನಸೌಧ ಸೇರಿದಂತೆ ನಗರದ ವಿವಿಧೆಡೆ ಮಳೆಯಾಗಿದೆ.
ಪರಿಣಾಮ ಕೆಲಸ ಮುಗಿಸಿ ಮನೆಗಳ ತೆರಳುವವರು ಪರದಾಡುವಂತಾದರೆ, ಟೌನ್ ಹಾಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಇಂದಿನಿಂದ ಮೇ 11ರವರೆಗೂ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿರುವ ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದೆ.
ಕರ್ನಾಟಕದ ಒಳನಾಡಿನಲ್ಲಿ 1.5 ಕಿ.ಮೀ ಎತ್ತರದಲ್ಲಿ ವಾಯು ಭಾರ ಕುಸಿತ ಹಿನ್ನಲೆ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೇ 9 ರಿಂದ ಮೇ 11 ರವರೆಗೆ ಮಳೆ ಅಬ್ಬರಿಸಲಿದೆ. ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿ, ನಾಳೆ ಹಾಗೂ ನಾಡಿದ್ದು ಬೆಂಗಳೂರಿಗೆ ಅಲರ್ಟ್ ಘೋಷಣೆ ಮಾಡಿದೆ.
ಮೇ 12 ರ ನಂತರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಟ್ಟಿನಲ್ಲಿ ಸತತ ಬಿಸಿಲಿನ ಧಗೆಯಲ್ಲಿದ್ದ ಬೆಂಗಳೂರಿಗೆ ಇನ್ನೂ 3 ದಿನಗಳ ಕಾಲ ಮಳೆ
ಒಂದಿಷ್ಟು ತಂಪು ತರಲಿದ್ದಾನೆ.