ಬೆಂಗಳೂರು: ಅತಿಯಾದ ಬಿಸಿಲಿನಿಂದಾಗಿ ನಗರದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದ್ದು, ಇತ್ತೀಚೆಗೆ ಕಾಲರಾ ಹೆಚ್ಚುತ್ತಿರುವ ಬಗ್ಗೆ ವರದಿಯಾಗಿದೆ.
ಮಾ. ೩೦ ರಂದು ಬಿಬಿಎಂಪಿ ವ್ಯಾಪ್ತಿಯ ಮಲ್ಲೇಶ್ವರದಲ್ಲಿ ವಾಸವಾಗಿರುವ ೨೭ ವರ್ಷ ವಯಸ್ಸಿನ ಮಹಿಳೆಯು ಅತಿಸಾರಭೇದಿ ಮತ್ತು ವಾಂತಿ ಲಕ್ಷಣಗಳೊಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲೆಗೊಂಡಿದ್ದು, ಕಾಲರಾ ಖಾತ್ರಿಯಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿರುವ ವೈದ್ಯರು ಸದರಿ ಮಹಿಳೆಗೆ ಕಾಲರಾ ಲಕ್ಷಣಗಳು ಕಂಡು ಬಂದಿದ್ದು, ಈ ಕುರಿತು ಪ್ರಾಥಮಿಕ ಮಾಹಿತಿಯನ್ನು ಹತ್ತಿರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಿಳಿಸಿರುತ್ತಾರೆ. ಆರಂಭಿಕ ಹಂತದ ಪರೀಕ್ಷೆಗಳಲ್ಲಿ ಕಾಲರಾ ಇರುವ ಬಗ್ಗೆ ಪಾಸಿಟೀವ್ ವರದಿ ಬಂದಿದ್ದು, ನಂತರ ಪ್ರಯೋಗಾಲಯದ ಪರೀಕ್ಷೆಯಲ್ಲಿ(ಮಲ ಮಾದರಿ ಪರೀಕ್ಷೆ) ನಗೆಟೀವ್ ವರದಿ ಬಂದಿರುತ್ತದೆ ಹಾಗೂ ಶಂಕಿತ ಮಹಿಳೆಯು ಇತ್ತೀಚಿನ ದಿನಗಳಲ್ಲಿ ಯಾವುದೇ ರೀತಿಯ ಪ್ರಯಾಣ, ಜನ ಪೀಡಿತ ಪ್ರದೇಶಗಳಿಗೆ ಭೇಟಿ ಹಾಗೂ ಹೊರಗಿನ ಆಹಾರ ಸೇವನೆಯನ್ನು ಮಾಡಿರುವುದಿಲ್ಲ. ಈ ಬಗ್ಗೆ ಬಿಬಿಎಂಪಿ ಕೆಲ ಕ್ರಮ ತೆಗೆದುಕೊಂಡಿದೆ.
ಪಾಲಿಕೆ ಕೈಗೊಂಡ ಕ್ರಮಗಳು
- ಪಾಲಿಕೆಯ ಆರೋಗ್ಯ ತಂಡದಿAದ ಶಂಕಿತ ಮಹಿಳೆ ವಾಸವಾಗಿರುವ ಸ್ಥಳದಿಂದ ಸುತ್ತಮುತ್ತಲಿನ ೧೬೫ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ, ಸಾರ್ವಜನಿಕರಿಗೆ ರೋಗ ಹರಡುವ ವಿಧಾನಗಳು, ನೈರ್ಮಲ್ಯದ ಪ್ರಾಮುಖ್ಯತೆ, ಶುದ್ಧ ನೀರಿನ ಬಳಕೆಯ, ಕೈಗಳನ್ನು ಸ್ವಚ್ಛಗೊಳಿಸುವ ಬಗೆಗಿನ ಅರಿವು ಮೂಡಿಸಿ ಆರೋಗ್ಯ ಶಿಕ್ಷಣವನ್ನು ನೀಡಲಾಗಿರುತ್ತದೆ.
- ಸದರಿ ೧೬೫ ಮನೆಗಳಲ್ಲಿ ಯಾವುದೇ ರೀತಿಯ ಕಾಲರಾರೋಗದ ಲಕ್ಷಣಗಳು ವರದಿಯಾಗಿರುವುದಿಲ್ಲ.
- ೧೦ ನೀರಿನ ಮಾದರಿಗಳನ್ನು ಸೋಂಕು ಶಂಕಿತ ಪ್ರದೇಶದಿಂದ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿರುತ್ತದೆ.
ಮುಂಜಾಗ್ರತಾ ಕ್ರಮಗಳು:
- ರೋಗ ಹರುಡುವಿಕೆಯನ್ನು ನಿಭಾಯಿಸಲು ವಿಧಾನಸಭಾ ಕ್ಷೇತ್ರವಾರು/ಕ್ಷೇತ್ರ ಮಟ್ಟದಲ್ಲಿ ಕ್ಷಿಪ್ರ ಪ್ರತಿಕ್ರಿ ತಂಡ ರಚನೆ ಮಾಡಲಾಗಿದೆ.
- ಎಲ್ಲಾ ಹೋಟೆಲ್/ರೆಸ್ಟೋರೆಂಟ್/ಕೆಫೆಗಳ ಮಾಲೀಕರಿಗೆ, ಗ್ರಾಹಕರಿಗೆ ಕುಡಿಯಲು ಕಾಯಿಸಿದ ನೀರನ್ನು ವಿತರಿಸಲು ಸಲಹೆ ನೀಡಲಾಗಿದೆ.
- ಪಾಲಿಕೆ ವ್ಯಾಪ್ತಿಯ ಎಲ್ಲಾ ಖಾಸಗಿ ಆಸ್ಪತ್ರೆ, ಖಾಸಗಿ ಲ್ಯಾಬ್‌ಗಳು ಮತ್ತು ಸರ್ಕಾರಿ ಆಸ್ಪತ್ರೆಗಳಾದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕ ಆಸ್ಪತ್ರೆ, ಜನರಲ್ ಆಸ್ಪತ್ರೆ, ವೈದ್ಯಕೀಯ ಶಿಕ್ಷಣ ಅಡಿಯಲ್ಲಿ ಬರುವ ಆಸ್ಪತ್ರೆಗಳು ಶಂಕಿತ ಪ್ರಕರಣಗಳು ವರದಿಯಾದ್ದಲ್ಲಿ ಸರ್ಕಾರ ನಿಗಧಿಪಡಿಸಿರುವ ಐಹೆಚ್‌ಐಪಿ ತಂತ್ರಾಶದಲ್ಲಿ ಕಡ್ಡಾಯವಾಗಿ ವರದಿ ಮಾಡುವಂತೆ ಸೂಚಿಸಲಾಗಿರುತ್ತದೆ.
- ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ವಿಶ್ಲೇಷಣೆಗಾಗಿ ನೀರಿನ ಮಾದರಿಗಳನ್ನು ಹಿರಿಯ ಆರೋಗ್ಯ ಪರಿವೀಕ್ಷಕರು ಸಂಗ್ರಹಿಸಿ ಲ್ಯಾಬ್‌ಗೆ ಪ್ರತಿನಿತ್ಯ ಕಳುಹಿಸಲು ಸೂಚಿಸಲಾಗಿರುತ್ತದೆ.
- ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಖS ಕಾರ್ನರ್‌ಗಳನ್ನು ಸ್ಥಾಪಿಸುವ ಮೂಲಕ ಆಸ್ಪತ್ರೆಗೆ ಬರುವ ಹೊರರೋಗಿಗಳಲ್ಲಿ ಜಾಗೃತಿ ಮೂಡಿಸುವುದು ಹಾಗೂ ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟುವ ಬಗ್ಗೆ ಆರೋಗ್ಯ ಶಿಕ್ಷಣ ನೀಡುವುದು.
- ಕಾಲರಾ ರೋಗ ಹರುಡುವಿಕೆಯನ್ನು ನಿಭಾಯಿಸಲು ಆರೋಗ್ಯಾಧಿಕಾರಿ ಹಾಗೂ ಆರೋಗ್ಯ ವೈದ್ಯಾಧಿಕಾರಿಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್ ಸೂಚಿಸಿರುತ್ತಾರೆ.