ಉಪಯುಕ್ತ ರಾಜಕೀಯ ಸುದ್ದಿ

“ಪೆನ್ ಡ್ರೈವ್”ಗಿಂತಲೂ ಅಶ್ಲೀಲವಾಗುತ್ತಿವೆ ರಾಜಕೀಯ ನಾಯಕರ ಮಾತುಗಳು !

Share It

ಪರಸ್ಪರ ವೈಯಕ್ತಿಕ ಟೀಕೆಗಳಿಗೆ ಇಳಿದ ಉಭಯ ಪಕ್ಷದ ನಾಯಕರು
ಕುಮಾರಸ್ವಾಮಿ ಬಾಯಿಂದ ಸಿದ್ದರಾಮಯ್ಯ ಮಗನ ಸಾವಿನ ಮಾತೇಕೆ?

ಬೆಂಗಳೂರು:ಪ್ರಜ್ವಲ್ ಪ್ರಕರಣದಲ್ಲಿ ಆರೋಪಿ ಎನಿಸಿಕೊಂಡಿರುವ ಪ್ರಜ್ವಲ್ ವಿದೇಶ ಸುತ್ತಿಕೊಂಡು ಆರಾಮವಾಗಿದ್ದರೆ, ಇಲ್ಲಿ ರಾಜಕೀಯ ಕೆಸರೆರಚಾಟ ಜೋರಾಗಿ ನಡೆದಿದೆ.

ಪ್ರಜ್ವಲ್ ಪೆನ್ ಡ್ರೈವ್ ಟೀಕೆಗಳು ಬರಬರುತ್ತಾ ತೀರಾ ವೈಯಕ್ತಿಕ ಮಟ್ಟವನ್ನು ತಲುಪುತ್ತಿವೆ. ಪೆನ್ ಡ್ರೈವ್ ಪ್ರಕರಣದಲ್ಲಿ ನೊಂದವರಿಗೆ ನ್ಯಾಯ ಕೊಡಿಸಬೇಕು ಎಂಬ ನಿಷ್ಠೆ ಯಾರಿಗೂ ಇದ್ದಂತೆ ಕಾಣುತ್ತಿಲ್ಲ, ಒಟ್ಟಾರೆ ತಮ್ಮ ತಮ್ಮ ಹಿತಾಸಕ್ತಿಯ ಮೂಲಕ ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನವೇ ನಡೆದಿದೆ.

ಪೆನ್ ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ಮೊದಲ ಆರೋಪಿ. ಆದರೆ, ಅದನ್ನು ಹಂಚಿಕೆ ಮಾಡಿದ ಆರೋಪದಲ್ಲಿ ಡಿಕೆ ಹೆಸರನ್ನು ಮಾಜಿ ಸಿಎಂ ಕುಮಾರಸ್ವಾಮಿ ಹರಿಬಿಟ್ಟುಬಿಟ್ಟಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಹಿಂಬಾಲಕರು ಡಿಕೆಶಿಗೆ “ಸಿಡಿ ಶಿವು” ಎಂಬ ಉಪನಾಮದಿಂದಲೇ ಕರೆಯುತ್ತಿದ್ದಾರೆ. ಸಧ್ಯಕ್ಕಂತೂ ಡಿಕೆಶಿ ಪೆನ್ ಡ್ರೈವ್ ಕುರಿತು ಮಾತನ್ನಾಡುವುದನ್ನೇ ಬಿಟ್ಟಿದ್ದು, ತಿರುಗೇಟು ಬರುತ್ತಿಲ್ಲ.

ಎಲ್.ಆರ್. ಶಿವರಾಮೇಗೌಡದ್ದು ಎನ್ನಲಾದ, ಆಡಿಯೋದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸಾವಿನ ಬಗ್ಗೆ ಪ್ರಸ್ತಾಪ ಮಾಡಿದ್ದು, ಇಡೀ ಪ್ರಕರಣದ ದುರಂತ ಎನ್ನಬಹುದು. ಇನ್ನು ದೊಡ್ಡಗೌಡರು ಪ್ರಜ್ವಲ್‌ಗೆ ಪತ್ರ ಬರೆದು, ಎಸ್‌ಐಟಿ ಮುಂದೆ ಹಾಜರಾಗುವಂತೆ ಖಡಕ್ ಎಚ್ಚರಿಕೆ ಕೊಟ್ಟಿದ್ದಕ್ಕೆ, ಸಿಎಂ ಸಿದ್ದರಾಮಯ್ಯ, ದೇವೇಗೌಡರೇ ಕಳುಹಿಸಿ, ನಾಟಕ ಮಾಡ್ತಾರೆ ಎಂದಿದ್ದರು.

ಇದೀಗ ಸಿದ್ದರಾಮಯ್ಯ ಅವರಿಗೆ ಕೌಂಟರ್ ಕೊಡುವ ಭರದಲ್ಲಿ, ಎಚ್.ಡಿ. ಕುಮಾರಸ್ವಾಮಿ, ನಿಮ್ಮ ಮಗ ಫಾರಿನ್ ಗೆ ಹೋಗಿ ಸಾವನ್ನಪ್ಪಿದ್ದನಲ್ಲ, ಆಗ ನಿಮಗೆ ಹೇಳಿಯೇ ಹೋಗಿದ್ನಾ ಎಂದು ಪ್ರಶ್ನೆ ಮಾಡಿದ್ದರು. ಇದು ಸಹಜವಾಗಿಯೇ ಮಗನನ್ನು ಕಳೆದುಕೊಂಡಿರುವ ಸಿದ್ದರಾಮಯ್ಯ ಅವರಿಗೆ ನೋವಾಗಿದೆ. ನನ್ನ ಮಗನ ಮಾತು ಈಗೇಕೆ ಎಂದು ಪ್ರಶ್ನೆ ಮಾಡಿದ್ದಾರೆ,

ಕುಮಾರಸ್ವಾಮಿ ಅವರ ಇಂತಹ ಮಾತಿಗೆ ಕೌಂಟರ್ ಕೊಡಲು ಆರಂಭಿಸಿರುವ ಕಾಂಗ್ರೆಸ್‌ನ ಕೆಲ ನಾಯಕರು, ಕುಮಾರಸ್ವಾಮಿಯನ್ನು ಟಾರ್ಗೆಟ್ ಮಾಡಿದ್ದಾರೆ. ಹಾಸನದ ಉಸ್ತುವಾರಿ ಸಚಿವರೂ ಆದ ಕೆ,ಎನ್.ರಾಜಣ್ಣ, ಕುಮಾರಸ್ವಾಮಿಯೇ ಪೆನ್ ಡ್ರೈವ್ ಮಾಸ್ಟರ್ ಎನ್ನುವ ಮೂಲಕ ಪೆನ್ ಡ್ರೈವ್ ಪ್ರಕರಣವನ್ನು ಕುಮಾರಸ್ವಾಮಿ ತಲೆಗೆ ಕಟ್ಟುವ ಪ್ರಯತ್ನ ನಡೆಸಿದ್ದಾರೆ.

ಕುಮಾರಸ್ವಾಮಿ ಅವರ ವೆಸ್ಟೆಂಡ್ ಹೋಟೆಲ್ ವಾಸ್ತವ್ಯ, ಚಿತ್ರನಟಿಯೊಂದಿಗಿನ ಸಂಬಂಧ, ಸಿನಿಮಾ ಹಂಚಿಕೆಯ ವ್ಯವಹಾರಗಳನ್ನೆಲ್ಲ ಪೆನ್ ಡ್ರೈವ್ ಪ್ರಕರಣಕ್ಕೆ ಹೋಲಿಕೆ ಮಾಡಿ, ಮಾತನ್ನಾಡುತ್ತಿದ್ದಾರೆ. ಕುಮಾರಸ್ವಾಮಿ ಕೂಡ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಕುರಿತು, ಮಾತನ್ನಾಡುವ ಮಾತುಗಳು ತೀರಾ ವೈಯಕ್ತಿವಾಗುತ್ತಿವೆ.

ರಾಜಕೀಯ ನಾಯಕರ ಈ ಕಿತ್ತಾಟದಲ್ಲಿ ಪೊಲೀಸರು, ಮಾಧ್ಯಮಗಳು, ಜನಪ್ರತಿನಿಧಿಗಳು ಎಲ್ಲರೂ ಕೂಡ ಪೆನ್ ಡ್ರೈವ್ ಪ್ರಕರಣದ ಸಂತ್ರಸ್ತೆಯನ್ನು ಮರೆತೇ ಬಿಟ್ಟಿದ್ದಾರೆ. ಅವರಿಗೆ ಸಾಮಾಜಿಕವಾಗಿ ಆಗುತ್ತಿರುವ ತೊಂದರೆಗಳೇನು? ಆರೋಪಿಗಳಿಂದ ಏನಾದರೂ ಬೆದರಿಕೆ ಇದೆಯಾ? ಕುಟುಂಬದಲ್ಲಿ ಅವರು ಪಡುತ್ತಿರುವ ಕಷ್ಟಗಳೇನು? ಮುಂದೆ ಅವರೆಲ್ಲರೂ ದೂರು ನೀಡಲು ಸಜ್ಜಾಗುತ್ತಾರಾ? ಇಲ್ಲ ತಮ್ಮಲ್ಲಿಯೇ ನುಂಗಿಕೊಂಡು ಸುಮ್ಮನಾಗುತ್ತಾರಾ ಎಂಬೆಲ್ಲ ಚರ್ಚೆಗಳು ಇದೀಗ ನಗಣ್ಯವಾಗಿವೆ.

ಇಂತಹ ಬೆಳವಣೀಗೆ ನಾಗರಿಕ ಸಮಾಜದ ಲಕ್ಷಣವಲ್ಲ. ಆಳುವವರು ಏನೇ ಟೀಕೆಗಳಿರಲಿ, ಸಮಾಜದಲ್ಲಿ ನೊಂದವರಿಗೆ ದನಿಯಾಗಿ ನಿಲ್ಲಬೇಕು. ತಮ್ಮ ರಕ್ಷಣೆಗೆ, ತಮ್ಮ ಕುಟುಂಬದ ರಕ್ಷಣೆಗೆ ಅಥವಾ ತಮ್ಮ ಪಕ್ಷ, ಸರಕಾರದ ರಕ್ಷಣೆಗಾಗಿ, ನೊಂದ ಅಬಲೆಯರ ಜೀವನದ ಬಗ್ಗೆ ಆಲೋಚನೆ ಮಾಡದಿರುವುದು ತಪ್ಪು ಎಂದು ಹೇಳಬಹುದು.


Share It

You cannot copy content of this page