ಅಪರಾಧ ಸುದ್ದಿ

ವಿಜಯಪುರ ಪಾಲಿಕೆ ನಿರ್ಲಕ್ಷ್ಯಕ್ಕೆ ಮೂವರು ಮಕ್ಕಳು ಬಲಿ

Share It

ತ್ಯಾಜ್ಯ ನೀರು ಸಂಸ್ಕರಣ ಘಟಕಕ್ಕೆ ತಂತಿ ಬೇಲಿಯೇ ಇಲ್ಲ
ಸೆಕ್ಯೂರಿಟಿಯೂ ಇಲ್ಲ, ಹೇಳೋರಿಲ್ಲ ಕೇಳೋರಿಲ್ಲ
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ನಿರ್ಲಕ್ಷ್ಯ ಮೂರು ಮುದ್ದು ಕಂದಮ್ಮಗಳನ್ನು ಬಲಿ ಪಡೆದುಕೊಂಡಿದೆ. ಪಾಲಿಕೆಯ ಯುಜಿಡಿಯಲ್ಲಿ ಮುಳುಗಿ ಮೂವರು ಮಕ್ಕಳು ದುರ್ಮರಣ ಹೊಂದಿದ್ದಾರೆ.

ವಿಂಜಯಪುರ ಮಹಾನಗರ ಪಾಲಿಕೆ ಇಂಡಿ ರಸ್ತೆಯಲ್ಲಿ ಬೃಹತ್ ತ್ಯಾಜ್ಯ ನೀರು ಸಂಸ್ಕರಣ ಘಟಕವನ್ನು ಆರಂಭಿಸಿದೆ. ಅಲ್ಲಿ, ಇಡೀ ನಗರದ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲಾಗುತ್ತದೆ. ಘಟಕ ನಿರ್ಮಾಣಕ್ಕಾಗಿ ಪಾಲಿಕೆ ಕೋಟ್ಯಂತರ ರುಪಾಯಿ ಅನುದಾನ ಬಳಕೆ ಮಾಡಿದೆ. ಆದರೆ, ಸಾರ್ವಜನಿಕರಿಗೆ ಅನುಕೂಲವಾಗುವಂತೆ, ಘಟಕದ ಸುತ್ತ, ಗೋಡೆಯನ್ನಾಗಲೀ, ತಂತಿ ಬೇಲಿಯನ್ನಾಗಲೀ ಹಾಕಿಲ್ಲ. ಇಂತಹ ನಿರ್ಲಕ್ಷ್ಯಕ್ಕೆ ಇದೀಗ ಮೂವರು ಮಕ್ಕಳು ಬಲಿಯಾಗಿದ್ದಾರೆ.

ಭಾನುವಾರ ಆಟವಾಡುತ್ತಾ ತ್ಯಾಜ್ಯ ಸಂಸ್ಕರಣ ಘಟಕದ ಕಡೆಗೆ ಬಂದ ಮೂವರು ಮಕ್ಕಳು, ತ್ಯಾಜ್ಯ ಸಂಸ್ಕರಣ ಘಟಕದೊಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಒಂದು ಮಗು ಬಿದ್ದಿದ್ದು, ಅವನನ್ನು ಕಾಪಾಡಲು ಹೋದ ಮತ್ತಿಬ್ಬರು ಮಕ್ಕಳು ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ.

ರಜೆಗೆ ಬಂದಿದ್ದ ಮಕ್ಕಳು: ಇಂಡಿ ರಸ್ತೆಯಲ್ಲಿರುವ ನೆಂಟರ ಮನೆಗೆ ೧೦ ವರ್ಷದ ಅನುಷ್ಕಾ, ವಿಜಯ್ ಎಂಬ ಮಕ್ಕಳು ಆಗಮಿಸಿದ್ದರು. ಆ ಮನೆಯ ಶ್ರೀಕಾಂತ್ ಜತೆಗೆ ಮಕ್ಕಳು ಇಡೀ ದಿನ ಇಂಡಿ ರಸ್ತೆಯ ಸುತ್ತಮುತ್ತ ಆಟವಾಡುತ್ತಾ ಕಾಲ ಕಳೆಯುತ್ತಿದ್ದರು. ಹೀಗೆ, ಅಂಗಡಿಯ ಮುಂದೆ ಮತ್ತು ಇಂಡಿ ರಸ್ತೆಯಲ್ಲಿ ಮಕ್ಕಳು ತಿರುಗಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ಅನಂತರ ಮಕ್ಕಳು ಮನೆಗೆ ಬಂದಿರಲಿಲ್ಲ.

ಮಕ್ಕಳು ಮನೆಗೆ ಬರದಿರುವುದನ್ನು ಕಂಡು ಪೋಷಕರು ಗಾಬರಿಗೊಂಡು, ಪೊಲೀಸರಿಗೆ ದೂರು ಕೂಡ ನೀಡಿದ್ದರು. ನೆನ್ನೆ ರಾತ್ರಿಯೆಲ್ಲ ಮಕ್ಕಳನ್ನು ಹುಡುಕಿದ ಪೋಷಕರು, ಇಂದು ಬೆಳಗ್ಗೆಯೂ ಕೂಡ ಹುಡುಕಾಟ ನಡೆಸಿದ್ದರು. ಆದರೆ, ಇಂಡಿ ರಸ್ತೆಯಲ್ಲೇ ಇರುವ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಶವಗಳು ತೇಲುತ್ತಿರುವುದನ್ನು ಕಂಡ ಸಾರ್ವಜನಿಕರು ಮಾಹಿತಿ ತಿಳಿಸಿದ್ದಾರೆ.

ತ್ಯಾಜ್ಯ ಘಟಕದಲ್ಲಿ ತೇಲುತ್ತಿದ್ದ ಶವ: ಮಕ್ಕಳಿಗಾಗಿ ಪೋಷಕರು ಹುಡುಕಾಟ ನಡೆಸುತ್ತಿದ್ದರೆ, ತ್ಯಾಜ್ಯ ಘಟಕದ ನೀರಿನಲ್ಲಿ ಮೂವರ ಶವಗಳು ತೇಲುತ್ತಿರುವುದನ್ನು ಕಂಡ ಸ್ಥಳೀಯರು ಮಾಹಿತಿ ನೀಡಿದ್ದರು. ಅನಂತರ ಅಲ್ಲಿ ಬಂದು ನೋಡಿದಾಗ ಅದೇ ಮಕ್ಕಳ ಶವ ಎಂದು ಗೊತ್ತಾಗಿದೆ. ಒಂದು ಮಗು ಕಾಲು ಜಾರಿಬಿದ್ದು, ಅವನನ್ನು ಕಾಪಾಡಲು ಪ್ರಯತ್ನ ಮಾಡಿ ಮೂವರು ಕಾಲು ಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪಾಲಿಕೆ ತ್ಯಾಜ್ಯ ಘಟಕಕ್ಕೆ ಯಾವುದೇ ಸುರಕ್ಷತೆ ಒದಗಿಸದಿರುವ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.


Share It

You cannot copy content of this page