ಬೆಂಗಳೂರು: ಬೆಂಗಳೂರಿನಲ್ಲಿ ಸಂಸ್ಕರಿಸಿದ ನೀರಿನ ಬಳಕೆಯನ್ನು ಮತ್ತಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಕೈಗಾರಿಕೆಗಳಿಗೆ ಪ್ರತ್ಯೇಕ ಪೈಪ್‌ಲೈನ್ ಮೂಲಕ ಸಂಸ್ಕರಿಸಿದ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಜಲಮಂಡಳಿ ಚಿಂತನೆ ನಡೆಸುತ್ತಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
‘ಬೆಂಗಳೂರು ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅವರು, ಬೆಂಗಳೂರು ನಗರದಲ್ಲಿ 1,480 ಎಂ.ಎಲ್.ಡಿ ತ್ಯಾಜ್ಯ ನೀರು ಉತ್ಪಾದನೆ ಆಗುತ್ತದೆ. ಪ್ರಸ್ತುತ 1,212 ಎಂ.ಎಲ್.ಡಿ ನೀರನ್ನು ಶುದ್ದೀಕರಿಸಲಾಗುತ್ತಿದೆ. ಇದರ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಲಮಂಡಳಿ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಸಂಸ್ಕರಿಸಿದ ನೀರಿನ ಬಳಕೆಯನ್ನು ಮತ್ತಷ್ಟು ಹೆಚ್ಚಿಸುವ ಮೂಲಕ ಕಾವೇರಿ ನೀರಿನ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವುದು ನಮ್ಮ ಗುರಿಯಾಗಿದ್ದು, ಈ ಹಿನ್ನಲೆಯಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಪ್ರತ್ಯೇಕ ಪೈಪ್ ಲೈನ್ ಮೂಲಕ ಕೈಗಾರಿಕೆಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಈ ತರಹದ ಪ್ರಯತ್ನ ದೇಶದಲ್ಲೇ ಮೊದಲು ಎಂದು ಅವರು ತಿಳಿಸಿದರು.