ಸುದ್ದಿ

ಕೈದಿಗಳಿಗೆ ವಿಐಪಿ ಸೌಲಭ್ಯ ನೀಡಲು ಬಿಡುವುದಿಲ್ಲ: ಹಳೆ ಚಾಳಿ ಬಿಡದ ಅಧಿಕಾರಿಗಳ ವಿರುದ್ಧ ಕ್ರಮ: ಪ್ರಿಯಾಂಕ್ ಖರ್ಗೆ

Share It

ಬೆಂಗಳೂರು: ಕಾರಾಗೃಹಗಳಲ್ಲಿ ಕೈದಿಗಳಿಗೆ ವಿಐಪಿ ಸೌಲಭ್ಯ ಕೊಡಲು ಬಿಡುವುದಿಲ್ಲ. ಇಲಾಖೆಯಲ್ಲಿ ಹಳೆ ಚಾಳಿ ಬಿಡದ ಕೆಲ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಪ್ರಿಯಾಂಕ್​ ಖರ್ಗೆ ತಿಳಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನ ಮೇಲೆ CCB ಹಾಗೂ ಎಲೆಕ್ಟ್ರಾನಿಕ್ ಉಪವಿಭಾಗ ಸೇರಿ 100ಕ್ಕೂ ಹೆಚ್ಚು ಪೊಲೀಸರಿಂದ ದಾಳಿ ನಡೆಸಲಾಗಿತ್ತು. ತಪಾಸಣೆ ವೇಳೆ ಅತ್ಯಾಚಾರ ಪ್ರಕರಣದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ಕೊಠಡಿಯಲ್ಲಿ ಒಂದು ಮೊಬೈಲ್, ಚಾರ್ಜರ್ ಹಾಗೂ ಪೆನ್​ ಡ್ರೈವ್​ ಪತ್ತೆಯಾಗಿತ್ತು. ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, “ಕಳೆದ ವಾರ ಕಾರಾಗೃಹ ಇಲಾಖೆಗೆ ಭೇಟಿ ನೀಡಿದ ವೇಳೆ ಕೆಲ ಲೋಪಗಳು ಕಂಡುಬಂದಿದ್ದವು. ಸೆಂಟ್ರಲ್ ಜೈಲಿನಲ್ಲಿ ನಿಷೇಧಿತ ವಸ್ತುಗಳ ಬಳಕೆ ಬಗ್ಗೆ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರಿಗೆ ತಿಳಿಸಿ ದಾಳಿ ಮಾಡಿಸಿದ್ದೇನೆ. ಮೊಬೈಲ್ ಪತ್ತೆ ಬಗ್ಗೆ ಮಹಜರು ನಡೆಸಲಾಗುತ್ತಿದೆ. ಮೊಬೈಲ್ ಬಳಕೆ ಮಾಡುತ್ತಿದ್ದವರು ಯಾರು?. ಕೊಟ್ಟವರು ಯಾರು ಎಂಬುದರ ತನಿಖೆ ನಡೆಸಲಾಗುತ್ತಿದೆ ಎಂದರು.

ಕೃತ್ಯಕ್ಕೆ ಸಹಕರಿಸಿದವರಿಗೆ ಅಮಾನತು ಮಾಡಲು ಸೂಚಿಸಲಾಗಿದೆ. ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಎಲ್ಲಾ ಕಾರಾಗೃಹಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತೇವೆ. ಇಲಾಖೆಯಲ್ಲಿ ಹಳೆ ಚಾಳಿ ಬಿಡದ ಕೆಲ ಅಧಿಕಾರಿಗಳಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳುತ್ತೇನೆ. ವಿಐಪಿ ಸೌಲಭ್ಯ ಯಾರಿಗೂ ಕೊಡಲು ಬಿಡುವುದಿಲ್ಲ. ನಿನ್ನೆ ದಾಳಿ ಮಾಡಿರುವುದು ಎಲ್ಲರಿಗೂ ಒಂದು ಸಂದೇಶವಾಗಿದೆ” ಎಂದರು.


Share It

You cannot copy content of this page